ಮಡಿಕೇರಿ NEWS DESK ಡಿ.28 : ಮರಗೋಡಿನ ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸಿ ದೇವರ ದರ್ಶನ ಪಡೆಯುತ್ತಿದ್ದ ಕೊಡವರನ್ನು ಅವಮಾನಿಸಿರುವ ಮತ್ತು ಕುಪ್ಯಚೇಲೆಯನ್ನು ಅಗೌರವಿಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತೀಯ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ದೇವಾಲಯಗಳು ಊರಿನ ಜನರನ್ನು ಒಗ್ಗೂಡಿಸುವ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಆದರೆ ದೇವಾಲಯದಲ್ಲೇ ಜನಾಂಗ ಜನಾಂದ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡಿರುವುದು ವಿಷಾದನೀಯವೆಂದು ತಿಳಿಸಿದ್ದಾರೆ. ಕೊಡವರು ತಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸುವುದಕ್ಕಾಗಿ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸಿ ದೇವಾಲಯಗಳಿಗೆ ತೆರಳುತ್ತಾರೆಯೇ ಹೊರತು ಯಾರನ್ನೂ ನೋಯಿಸುವುದಕ್ಕಾಗಿ ಅಲ್ಲ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ಕೆಲವರು ಕುಪ್ಯಚೇಲೆ ಧರಿಸಿದ ಕೊಡವರನ್ನು ನೋಯಿಸಿದ್ದಾರೆ. ಕುಪ್ಯಚೇಲೆಯನ್ನು ಕಳಚುವಂತೆ ಒತ್ತಡ ಹೇರಿದ್ದಾರೆ. ಇದು ಕೊಡಗಿನ ಸಾಮರಸ್ಯವನ್ನು ಕದಡುವ ಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ದೇಶದ ಸಂಸತ್ ಭವನ, ರಾಜ್ಯದ ವಿಧಾನಸಭೆಗೂ ಆಯಾ ಸಮುದಾಯದ ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರವೇಶಿಸುವ ಹಕ್ಕನ್ನು ನೀಡಲಾಗಿದೆ. ಕೇರಳ ರಾಜ್ಯದ ಬೈತೂರು ಮತ್ತು ಪಯ್ಯನೂರು ದೇವಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಅರೆಕಲ್ಲು ದೇವಾಲಯದಲ್ಲೂ ಕೊಡವರು ಕೊಡವ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದಲ್ಲೂ ಕೊಡವರ ಕುಪ್ಯಚೇಲೆಗೆ ಅಪಾರ ಗೌರವ ಸಿಗುತ್ತಿದೆ. ಆದರೆ ಮೂಲನಿವಾಸಿ ಕೊಡವರ ನೆಲೆಬೀಡು ಕೊಡಗಿನಲ್ಲಿ ಕುಪ್ಯಚೇಲೆಯನ್ನು ಕಡೆಗಣಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮನು ಮುದ್ದಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಯನ್ನು ಕೊಡಗು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಕೊಡವರಿಗೆ ಹಾಗೂ ಕೊಡವ ಸಾಂಪ್ರದಾಯಿಕ ಉಡುಪು ಕುಪ್ಯಚೇಲೆಗೆ ಅಗೌರವ ತೋರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೊಡಗಿನ ದೇವಾಲಯಗಳಲ್ಲಿ ಕೊಡವ ಸಾಂಪ್ರದಾಯಿಕ ವಸ್ತ್ರ ಸಂಹಿತೆಯ ಸ್ವಾತಂತ್ರ್ಯಹರಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.