ಸಿದ್ದಾಪುರ ಜ.6 NEWS DESK : ಸಿದ್ದಾಪುರ ಇಕ್ರಾ ಶಾಲಾ ವಾರ್ಷಿಕೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ನೃತ್ಯೋತ್ಸವ ಕಾರ್ಯಕ್ರಮ
ಸಂಭ್ರಮದಿಂದ ನಡೆಯಿತು. ಇಕ್ರಾ ಪಬ್ಲಿಕ್ ಸ್ಕೂಲ್ ಮತ್ತು ಪ್ರಿ-ಯೂನಿವರ್ಸಿಟಿ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮದಲ್ಲಿ ಗಾಯನ, ಸಂಗೀತ, ನೃತ್ಯ, ಕರಾಟೆ ಪ್ರದರ್ಶನ ಸೇರಿದಂತೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನೆರೆದಿದ್ದ ನೂರಾರು ಪೋಷಕರ ಗಮನ ಸೆಳೆದವು. ಪುಟಾಣಿಗಳ ನೃತ್ಯೋತ್ಸವಕ್ಕೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಹಿಸಿದರು. ನೃತ್ಯ ಹಾಡುಗಳಿಗೆ ವಿದ್ಯಾರ್ಥಿಗಳು ಪೋಷಕರು ಕುಣಿದು ಕುಪ್ಪಳಿಸಿದರು. ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರು
ಉದ್ಘಾಟಿಸಿ ಮಾತನಾಡಿ, ಶಿಕ್ಷಣದಿಂದ ವಂಚಿತರಾಗದೆ ಮಕ್ಕಳ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ರೂಪಿಸಲು ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಉನ್ನತ ಹುದ್ದೆಯನ್ನು ಅಲಂಕರಿಸುವುದರೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ಇಕ್ರಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಕೆ.ಯು.ಅಬ್ದುಲ್ ರಜಾಕ್ ಪ್ರಸ್ತಾವಿಕ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದಲೂ ಸಿದ್ದಾಪುರ ಸುತ್ತಮುತ್ತಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆ, ಕಾಲೇಜಿನಲ್ಲಿ ಶಿಕ್ಷಣ ಕಲಿಯುತ್ತಿದ್ದು, ಕಳೆದ 10 ವರ್ಷಗಳಿಂದ ಶೇ.100ರಷ್ಟು ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ತಮ್ಮ ಸಾಧನೆ ತೋರಿದ್ದಾರೆ. ಇದರೊಂದಿಗೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲೂ ಜಿಲ್ಲೆ ರಾಜ್ಯಮಟ್ಟದಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸಲು ಶಿಕ್ಷಕರು ಮುಂದಾಗಿದ್ದು, ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು. ಈ ಸಂದರ್ಭ ಜಿ.ಪಂ ಮಾಜಿ ಸದಸ್ಯ ಎಂ.ಎಸ್.ವೆಂಕಟೇಶ್, ಇಕ್ರಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಕೆ.ಬಸೀರ್ ಹಾಜಿ, ಕಾರ್ಯದರ್ಶಿ ಕೆ.ಯು.ಅಬ್ದುಲ್ ಮಜೀದ್, ಲಯನ್ಸ್ ಅಧ್ಯಕ್ಷ ಸುನೀಲ್, ಸಿ.ಆರ್.ಪಿ.ಅಶೋಕ್, ಪ್ರಮುಖರಾದ
ರೌವೂಪ್ ಹಾಜಿ, ಸಮೀರ್, ಮಣಿ ಮಾಸ್ಟರ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರುಗಳು,ವಿದ್ಯಾರ್ಥಿಗಳು,ಪೋಷಕರು ಹಾಜರಿದ್ದರು. ಇದೆ ಸಂದರ್ಭ ಪದವಿ ಶಿಕ್ಷಣದಲ್ಲಿ ಕೊಡಗು ಜಿಲ್ಲೆಗೆ ಕಲಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಸಫ್ವಾನ, ವಾಣಿಜ್ಯ ವಿಬಾಗದಲ್ಲಿ ಜಿಲ್ಲೆಗೆ 7 ನೇ ಸ್ತಾನ ಪಡೆದ ಅಸ್ಮಿಯ, ಎಸ್ ಎಲ್ ಸಿ ಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಸಮ್ನ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು.
ವರದಿ : ಮುಬಾರಕ್