ಮಡಿಕೇರಿ ಜ.10 NEWS DESK : ಕುಂದಚೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಕೋಪಟ್ಟಿ ದೇವಸ್ಥಾನ, ಕೋಪಟ್ಟಿ ಶಾಲೆ, ಚೆರಂಡೇಟಿ, ಚಿಟ್ಟಿಮಾನಿ ಪದಕಲ್ಲು, ಕೋಡಿ ಮೊಟ್ಟೆ, ತಾಪ್ರಿಕಾಡು, ಪೂವಲೆ ಮಾನಿ, ಸಿಂಗತ್ತೂರು ಸೇರಿದಂತೆ ಒಟ್ಟು 9 ಅಂಗನವಾಡಿ ಕೇಂದ್ರಗಳಿಗೆ ಕೊಡುಗೆ ನೀಡಲಾಯಿತು. ಮೇಲ್ವಿಚಾರಕಿಯವರ ಮಾರ್ಗದರ್ಶನದಂತೆ ಅಂಗನವಾಡಿ ಕಾರ್ಯಕರ್ತೆಯರಾದ ಸುಶಿ, ಯೋಗ್ಯತಾ, ಈಶ್ವರಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರೊಂದಿಗೆ ಚೇರುಗಳ ಬೇಡಿಕೆಯನ್ನು ಸಲ್ಲಿಸಿದ್ದರು. ಅವರ ಕೋರಿಕೆಯಂತೆ ಚೆಟ್ಟಿಮಾನಿ ಅಂಗನವಾಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಚೇರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ದಿನೇಶ್ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಸದಸ್ಯರಾದ ಹ್ಯಾರಿಸ್ ಮಾತನಾಡಿ ಕುಂದಾಚೇರಿ ಗ್ರಾ.ಪಂ ಗೆ ಒಳಪಟ್ಟ 9 ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತಿಯಿಂದ ದೊರಕುವಂತ ಎಲ್ಲ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳಿಗೆ ನೀಡಲಾಗುವುದು ಎಂದು ತಿಳಿಸಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ ಕುಂದಾಚೇರಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಗೆ ಇಲಾಖೆ ಪರವಾಗಿ ಧನ್ಯವಾದ ಅರ್ಪಿಸುತ್ತಾ, ಗ್ರಾಮ ಪಂಚಾಯಿತಿಗೆ ಒಳಪಡುವ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಉದ್ಯಾನವನ ಮತ್ತು ಜಾರುಬಂಡಿ, ಜೋಕಾಲಿ, ಒಳಗೊಂಡಂತೆ ಒಳಾಂಗಣ ಮತ್ತು ಹೊರಾಂಗಣ ಆಟಿಕೆಗಳನ್ನು ಗ್ರಾ.ಪಂ ನಿಂದ ಕೊಡಿಸುವಂತೆ ಕೋರಿಕೊಂಡರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯಾದವ್ ಮಾತನಾಡಿ, ಹಂತ ಹಂತವಾಗಿ ಅಂಗನವಾಡಿಗಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುವುದಾಗಿ ಭರವಸೆ ನೀಡಿದರು. ಚೆಟ್ಟಿಮಾನಿ ಅಂಗನವಾಡಿ ಕಾರ್ಯಕರ್ತೆ ಸುಶಿ ಮಾತನಾಡಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.