ಮಡಿಕೇರಿ NEWS DESK ಜ.10 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲು ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕೆ ಹೊರತು ಮತ್ತೆ ಅಶಾಂತಿಗೆ ಪ್ರಚೋದನೆ ನೀಡಬಾರದು ಎಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಅವರು ಕೆಲವರು ಒಂದು ಗ್ರಾಮದ ದೇವಾಲಯದಲ್ಲಿ ಎದುರಾದ ಭಿನ್ನಾಭಿಪ್ರಾಯವನ್ನೇ ಬಂಡವಾಳ ಮಾಡಿಕೊಂಡು ಜಾತಿ ನಿಂದನೆ ಮತ್ತು ಪ್ರಚೋದನೆಯಲ್ಲಿ ತೊಡಗಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ವಿನಾಕಾರಣ ಇಲ್ಲಸಲ್ಲದ ಗೊಂದಲಗಳನ್ನು ಸೃಷ್ಟಿಸಿ ಸಮಾಜದಲ್ಲಿ ಯಾರೂ ಅಶಾಂತಿ ಮೂಡಿಸಬಾರದು. ದೇವರು ಅಥವಾ ದೇವಾಲಯದ ಹೆಸರಿನಲ್ಲಿ ಹೇಳಿಕೆ ಪ್ರತಿ ಹೇಳಿಕೆಗಳನ್ನು ನೀಡಿ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿರುವ ಬೆಳವಣಿಗೆ ಪ್ರಜ್ಞಾವಂತರ ಜಿಲ್ಲೆ ಕೊಡಗು ತಲೆತಗ್ಗಿಸುವಂತ್ತಾಗಿದೆ.
ಜಿಲ್ಲಾಧಿಕಾರಿಗಳು ಈಗಾಗಲೇ ಶ್ರೀ ಮಹಾಮೃತ್ಯುಂಜಯ ದೇವಾಲಯ ಸಮಿತಿಗೆ ಗೊಂದಲ ನಿವಾರಣೆಗೆ ಫೆ.10 ರವರೆಗೆ ಕಾಲಾವಕಾಶವನ್ನು ನೀಡಿದ್ದು, ಜಿಲ್ಲಾಡಳಿತದ ಆದೇಶವೇ ಅಂತಿಮ ಪರಿಹಾರ ಎನ್ನಿಸಿಕೊಳ್ಳುತ್ತದೆ. ಇದನ್ನು ತಾಳ್ಮೆಯಿಂದ ನಿರೀಕ್ಷಿಸುವ ಬದಲು ಜಾತಿಯ ಹೆಸರಿನಲ್ಲಿ ಪ್ರಚೋದನೆ ನೀಡಿ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವುದು ಸರಿಯಲ್ಲ. ಬೆರಳೆಣಿಕೆಯಷ್ಟು ಮಂದಿ ಮಾಡುವ ಪ್ರಚೋದನೆಯಿಂದ ಇಡೀ ಕೊಡಗಿನ ನೆಮ್ಮದಿಗೆ ಭಂಗವಾಗುತ್ತಿದೆ.
ಈ ರೀತಿಯ ಪರಿಸ್ಥಿತಿಗಳು ಎದುರಾದಾಗ ಒಗ್ಗಟ್ಟನ್ನು ಕಾಯ್ದುಕೊಳ್ಳಲೆಂದು ಇತ್ತೀಚೆಗೆ ಕೊಡಗು ಸರ್ವ ಜನಾಂಗಗಳ ಒಕ್ಕೂಟವೊಂದನ್ನು ರಚಿಸಲಾಗಿದೆ. ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ ಅಗೌರವ ತೋರಿದ ಕಾರಣಕ್ಕಾಗಿ ಈ ಒಕ್ಕೂಟ ಎಲ್ಲಾ ಜನಾಂಗಗಳನ್ನು ಒಗ್ಗೂಡಿಸಿತ್ತು. ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ವಿಚಾರದಲ್ಲಿ ಕೂಡ ಇದು ಮಧ್ಯಪ್ರವೇಶಿಸಿ ಜಾತಿ ನಿಂದನೆ ಮತ್ತು ಪ್ರಚೋದನೆಯಾಗುವುದನ್ನು ತಡೆಯಬೇಕು. ಕೊಡಗಿನ ಹಿರಿಯರು ಹಾಗೂ ಪ್ರಜ್ಞಾವಂತರು ಮುಂದೆ ಬಂದು ಎಲ್ಲಾ ಗೊಂದಲಗಳನ್ನು ನಿವಾರಿಸುವ ಮೂಲಕ ಕೊಡಗನ್ನು ಸರ್ವ ಜನಾಂಗಗಳ ಶಾಂತಿಯ ತೋಟವನ್ನಾಗಿ ಮಾಡಬೇಕೆಂದು ಎಸ್.ಎಂ.ಚಂಗಪ್ಪ ಮನವಿ ಮಾಡಿದ್ದಾರೆ.