ಮಡಿಕೇರಿ ಜ.11 NEWS DESK : ಕೊಡಗಿನ ಸೈನಿಕ ಶಾಲೆಗೆ ಭಾರತೀಯ ವಾಯು ಸೇನೆಯ ತರಬೇತಿ ಕಮಾಂಡ್ ಏರ್ ಮಾರ್ಷಲ್ ನಾಗೇಶ್ ಕಪೂರ್ (ಎ.ವಿ.ಎಸ್.ಎಂ, ವಿ.ಎಂ, ಎಒಸಿ-ಇನ್-ಸಿ) ಪತ್ನಿ ಏ.ಎಫ್.ಎಫ್.ಡಬ್ಲೂ ಏ (ಪ್ರಾದೇಶಿಕ) ಅಧ್ಯಕ್ಷರಾದ ವಂದನಾ ಕಪೂರ್ ಅವರೊಂದಿಗೆ ಭೇಟಿ ನೀಡಿದರು. ಶಾಲೆಯಲ್ಲಿರುವ ಯುದ್ಧವೀರರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವುದರ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಿದರು. ನಂತರ ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ತಮ್ಮ ವೃತ್ತಿಪರ ಸಾಧನೆಗಳು ಮತ್ತು ತರಬೇತಿಯ ಆರಂಭಿಕ ದಿನಗಳಿಂದ ಏಒಸಿ-ಇನ್-ಸಿ ತರಬೇತಿ ಕಮಾಂಡ್, ಭಾರತೀಯ ವಾಯುಸೇನೆಯ ಅಧಿಕಾರಿಯಾಗುವವರೆಗಿನ ಗಮನಾರ್ಹ ಹಾಗೂ ಸುದೀರ್ಘ ಪ್ರಯಾಣದ ಮೇಲೆ ಬೆಳಕು ಚೆಲ್ಲಿದರು. ವಿದ್ಯಾರ್ಥಿಗಳು ತಮ್ಮ ಜೀವನದ ಮಹಾತ್ವಾಕಾಂಕ್ಷೆಗಳನ್ನು ನೆರವೇರಿಸಿಕೊಳ್ಳಲು ಉತ್ಸಾಹದಿಂದ ಕಾರ್ಯಪ್ರವೃತರಾಗಬೇಕೆಂದು ಸಲಹೆ ನೀಡಿದರು. ಯುಪಿಎಸ್‍ಸಿ, ಎನ್‍ಡಿಎ ಮತ್ತು ವಿವಿಧ ರಕ್ಷಣಾ ತರಬೇತಿ ಅಕಾಡೆಮಿಗಳಿಗೆ ಹಾಗೂ ಇತರೆ ಸೇನಾ ಇಲಾಖೆಯ ಪ್ರವೇಶಾತಿಗಳಿಗೆ ತಯಾರಿ ಮಾಡುವ ಕುರಿತು ಮಾರ್ಗದರ್ಶನ ನೀಡಿದರು. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಬದ್ಧತೆ ಮತ್ತು ಸಮರ್ಥ ರಕ್ಷಣಾ ಅಧಿಕಾರಿಯಾಗಲು ನಿರ್ಣಾಯಕವಾಗಿರುವ ಅತಿ ಮುಖ್ಯ ಗುಣಗಳನ್ನು ಅರ್ಥೈಸಿಕೊಂಡು ಅದರಂತೆ ತಮ್ಮ ಭವಿಷವನ್ನು ಮುನ್ನಡೆಸಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಮುಖ್ಯ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿದರೊಂದಿಗೆ, ಸೌಹಾರ್ದಯುತ ಭೇಟಿಯ ಪ್ರತೀಕವಾಗಿ ಶಾಲೆಯ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ಬೋಧಕ- ಬೋಧಕೇತರ ವರ್ಗದವರು, ಎನ್‍ಸಿಸಿ ಮತ್ತು ಪಿಐ ಸಿಬ್ಬಂದಿ ವರ್ಗದವರು ಹಾಗೂ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ಮೊದಲಿಗೆ ಶಾಲೆಯ ಆಶ್ವದಳವು ಅತಿಥಿಗಳನ್ನು ಸ್ವಾಗತಿಸಿತು. ಕೆಡೆಟ್ ನಿಶಾಂತ್ ನಾರಾಯಣ್ ಮತ್ತು ಕೆಡೆಟ್ ಪ್ರತ್ಯೂಷ್ ಸ್ವಾಗತಿಸಿ, ನಿರೂಪಿಸಿದರು. ಕೆಡೆಟ್ ಗೀತೇಶ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು.ಕೆಡೆಟ್ ಬಿ.ಯು.ದೀಪ್ತಿ ಮತ್ತು ತಂಡ ಸ್ವಾಗತ ನೃತ್ಯ ಮಾಡಿದರು. ಕೆಡೆಟ್ ರಾಮನ್ ಮತ್ತು ತಂಡ ಸ್ವಾಗತ ಗೀತೆ ಹಾಡಿದರು. ಕೆಡೆಟ್ ವೈ.ಡಿ.ಕೇದಾರ್ ಮತ್ತು ತಂಡ ಕರ್ನಾಟಕದ ಜಾನಪದ ನೃತ್ಯವಾದ `ಡೊಳ್ಳು ಕುಣಿತ’ವನ್ನು ಪ್ರದರ್ಶಿಸಿದರು.