ಪೊನ್ನಂಪೇಟೆ ಜ.13 NEWS DESK : ಕೊಟ್ಟಮುಡಿಯ ಮರ್ಕಜ್ಹುಲ್ ಹಿದಾಯ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಪ್ರಾಯೋಜಿಸಿರುವ ಮಾಹಿತಿ ತಂತ್ರಜ್ಞಾನ ಕಲಿಕಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಸೂಫಿ ಹಾಜಿ ಅವರ ಮಾಲಿಕತ್ವದ ಡಿ. ಹೆಚ್. ಎಸ್. ಗ್ರೂಪ್ ಆಫ್ ಕಂಪನೀಸ್ ಮೂಲಕ ತಮ್ಮ ತಂದೆ ದುದ್ದಿಯಂಡ ಪಿ. ಹುಸೇನಾರ್ ಹಾಜಿ ಮತ್ತು ತಾಯಿ ಆಮೀನ ಹಜ್ಜುಮ್ಮ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿರುವ ಈ ಕಲಿಕಾ ಕೇಂದ್ರವನ್ನು ಭಾರತದ ಪ್ರಸಿದ್ಧ ವಿದ್ವಾಂಸರಾದ ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯರ್ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ವಲಯ ಉಳಿದೆಲ್ಲ ವಲಯಗಳಿಂದ ಹೆಚ್ಚು ಅವಕಾಶಗಳನ್ನು ಮತ್ತು ಅನುಕೂಲಗಳನ್ನು ಕಲ್ಪಿಸುತ್ತದೆ ಎಂದು ಹೇಳಿದರು. ನಂತರ ನಡೆದ ಸಾಮೂಹಿಕ ಪ್ರಾರ್ಥನೆಗೆ ಎ.ಪಿ.ಅಬೂಬಕ್ಕರ್ ಮುಸ್ಲಿಯರ್ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ, ಮುಂದೆ ವಿಶ್ವದಲ್ಲೇ ಭಾರತ ಬಲಿಷ್ಠ ದೇಶವಾಗಿ ಹೊರಹೊಮ್ಮಲು ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ತರವಾದದ್ದು. ತಂತ್ರಜ್ಞಾನದ ಬಳಕೆಯಿಂದ ವಿದ್ಯಾರ್ಥಿಗಳ ಬೋಧನೆಗೆ ಸುಲಭವಾಗುತ್ತದೆ. ತಂತ್ರಜ್ಞಾನವು ಬೋಧನೆಯ ಜೊತೆಗೆ ಕಲಿಕೆಯನ್ನೂ ಪ್ರೇರೇಪಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಶೈಕ್ಶಣಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೊಡಗು ಮರ್ಕಜ್ಹುಲ್ ಹಿದಾಯ ಅಧ್ಯಕ್ಷ ಬಹುಭಾಷಾ ಶೈಕ್ಷಣಿಕ ತಜ್ಞ ಡಾ. ಎ.ಪಿ.ಅಬ್ದುಲ್ ಹಕೀಮ್ ಅಜ್ಹರಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಮತ್ತಷ್ಟು ಸಾಧನೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕಾದ ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದ ಯುವ ಸಮೂಹದ ಕೊಡುಗೆ ಅಪಾರವಾಗಿರಬೇಕು ಎಂದು ಹೇಳಿದರು. ಕೊಡಗು ಸುನಿಲ್ ವೆಲ್ಫೇರ್ ಅಸೋಸಿಯೇಷನ್ ನ ಜಿಸಿಸಿ ಅಧ್ಯಕ್ಷ ಹೆಚ್.ಎ.ಅಬೂಬಕ್ಕರ್ ಹಾಜಿ, ಕರ್ನಾಟಕ ರಾಜ್ಯ ವಖ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಫಿ ಸಹದಿ, ಕೊಟ್ಟಮುಡಿಯ ಮರ್ಕಜ್ಹುಲ್ ಹಿದಾಯ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ಪ್ರಧಾನ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ, ಪ್ರಾಂಶುಪಾಲ ಅಬ್ದುಲ್ ಖಾದರ್, ಆಡಳಿತಾಧಿಕಾರಿ ಕಬಡಕೇರಿ ಹಮೀದ್, ಪದಾಧಿಕಾರಿಗಳಾದ ಪಿ.ಎ.ಯೂಸೂಫ್ ಹಾಜಿ, ಕುಂಜಿಲ ಮೊಹಮ್ಮದ್ ಹಾಜಿ, ಸಿ.ಕೆ.ಅಹಮದ್ ಮುಸ್ಲಿಯಾರ್, ಕೊಳಕೇರಿಯ ಮೊಯ್ದು ಕುಟ್ಟಿ ಹಾಜಿ, ಪ್ರಮುಖರಾದ ಮನ್ಸೂರ್ ಅಲಿ, ಕೆ.ಎಂ.ಎ. ಕೋಶಾಧಿಕಾರಿ ಹೆಚ್.ಎ.ಹಂಸ, ನಿರ್ದೇಶಕರಾದ ಡಿ. ಹೆಚ್ ಮೊಯ್ದು, ಕುಂಡಂಡ ರಜ್ಹಾಕ್ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.