ಮಡಿಕೇರಿ ಜ.13 NEWS DESK : ಸ್ವಾಮಿ ವಿವೇಕಾನಂದ ಅವರಂತೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವತ್ತ ಯುವ ಸಮೂಹ ಗಮನಹರಿಸಬೇಕು ಎಂದು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ, ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ನಡೆದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರಂತೆ ಜೀವನದಲ್ಲಿ ಉದ್ದೇಶ ಮತ್ತು ಗುರಿ ಹೊಂದಿರಬೇಕು. ಭಾರತವು ಇಡೀ ವಿಶ್ವದಲ್ಲಿ ತಾಯಿ ಇದ್ದಂತೆ. ಆಧ್ಯಾತ್ಮಿಕತೆಯಲ್ಲಿ ಸ್ವಾಮಿ ವಿವೇಕಾನಂದರು ವಿಶ್ವ ಪರ್ಯಟನೆ ಮಾಡಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಸಹೋದರ, ಸಹೋದರಿಯರೆ ಎಂದು ಉಚ್ಛರಿಸಿ ಇಡೀ ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದರು. ಪ್ರಸ್ತುತ ಸಂದರ್ಭದಲ್ಲಿ ಹತ್ತಿರದವರನ್ನು ಸಹ ಸಹೋದರ/ ಸಹೋದರಿ ಎಂದು ಹೇಳಲು ಹಿಂಜರಿಯುತ್ತಾರೆ. ಅಂತದರಲ್ಲಿ ಸ್ವಾಮಿ ವಿವೇಕಾನಂದರು ವಿಶಾಲ ಮನೋಭಾವದಿಂದ ಎಲ್ಲರನ್ನು ಸಹೋದರ, ಸಹೋದರಿಯರು ಎಂದು ಸಂಭೋಧಿಸುವ ಮೂಲಕ ಭಾರತೀಯ ಸಂಸ್ಕøತಿ, ಸಂಸ್ಕಾರವನ್ನು ಇಡೀ ಜಗತ್ತಿಗೆ ಪರಿಚಯಿಸಿದರು ಎಂದು ಅವರು ಸ್ಮರಿಸಿದರು. ಸ್ವಾಮಿ ವಿವೇಕಾನಂದರ ದೂರದೃಷ್ಟಿ, ಚಿಂತನೆಗಳು ಸಾರ್ವಕಾಲೀಕವಾಗಿದ್ದು, ಅವರ ಬದುಕಿನ ವಿಚಾರಧಾರೆಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು. ಸತತ ಪರಿಶ್ರಮವಿದ್ದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಬಹುದು. ಆ ನಿಟ್ಟಿನಲ್ಲಿ ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಅನಂತಶಯನ ಸಲಹೆ ನೀಡಿದರು. ಸ್ವಾಮಿ ವಿವೇಕಾನಂದರು ರಾಷ್ಟ್ರದಲ್ಲಿನ ಬಡತನ, ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದಾರೆ. ಶಿಸ್ತಿನ ಬದುಕು ನಡೆಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದರು. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಸೇರಿದಂತೆ ಹಲವರ ವಿಚಾರಧಾರೆಗಳನ್ನು ತಿಳಿದುಕೊಳ್ಳುವಂತಾಗಬೇಕು. ಪ್ರತಿಯೊಬ್ಬರಲ್ಲಿಯೂ ಸಾಧನೆ ಮಾಡುವ ಮನಸ್ಸು ಇರಬೇಕು ಎಂದರು. ಇದೇ ಸಂದರ್ಭ ಗ್ರಂಥಾಲಯಗಳಿಗೆ ಭೇಟಿ ನೀಡುವವರು ಕೈ ಮೇಲೆ ಮಾಡಿ ಎಂದು ಅನಂತಶಯನ ಅವರು ಕೇಳಿದಾಗ ಬೆರಳೆಣಿಕೆ ಮಂದಿ ಕೈ ತೋರಿಸಿದರು, ಈ ಸಂದರ್ಭದಲ್ಲಿ ಪುಟ್ಟ ಬಾಲಕಿಗೆ ನಗದು ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಮಾತನಾಡಿ, ವಿದ್ಯಾರ್ಥಿಗಳು ಪ್ರಥಮ ಆದ್ಯತೆಯಲ್ಲಿ ಪಠ್ಯಪುಸ್ತಕ ಅಧ್ಯಯನ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ವಿಚಾರಧಾರೆ ತಿಳಿದುಕೊಳ್ಳುವಂತಾಗಬೇಕು ಎಂದರು. ರಾಷ್ಟ್ರದಲ್ಲಿ ಯುವ ಜನರ ಸಂಖ್ಯೆ ಹೆಚ್ಚಿದ್ದು, ಯುವಜನರು ತಮ್ಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ತಮ್ಮ ಕುಟುಂಬ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಸಮಾಜ ಚೆನ್ನಾಗಿದ್ದಲ್ಲಿ ರಾಷ್ಟ್ರ ಅಭಿವೃದ್ಧಿಯತ್ತ ಸಾಗುತ್ತದೆ. ಆ ನಿಟ್ಟಿನಲ್ಲಿ ಯುವಜನರು ಯೋಚಿಸಬೇಕು ಎಂದು ವಿ.ಟಿ.ವಿಸ್ಮಯಿ ನುಡಿದರು. ಇಂದಿನ ಯುವಜನರು ಸಾಮಾಜಿಕ ಜಾಲತಾಣಗಳಿಗೆ ತುತ್ತಾಗಿ ಹಾಳಾಗುತ್ತಿದ್ದಾರೆ. ಅದರ ಬದಲು ಪಠ್ಯಪುಸ್ತಕ ಅಧ್ಯಯನಕ್ಕೆ ಗಮನಹರಿಸಬೇಕು ಎಂದು ಹೇಳಿದರು. ಮೊಬೈಲ್ ಬಳಕೆಯಿಂದ ಮಾನಸಿಕವಾಗಿ ಮಕ್ಕಳು ಕುಗ್ಗುತ್ತಿದ್ದಾರೆ. ಸಮಾಜದಲ್ಲಿ ತಮ್ಮನ್ನು ತಾವು ಗೌರವಿಸಿಕೊಂಡು, ಇತರರನ್ನು ಗೌರವಿಸಲು ಮುಂದಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಹೇಳಿದರು. ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ಬದುಕಿದ್ದ ಕಡಿಮೆ ಅವಧಿಯಲ್ಲಿ ಇಡೀ ವಿಶ್ವದಲ್ಲಿ ಮಾದರಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರ ಸಂದೇಶಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದರು. ವಿದ್ಯಾರ್ಥಿಗಳು ಸೇರಿದಂತೆ ಉಪ ನ್ಯಾಸಕರು ಸಹ ಗ್ರಂಥಾಲಯ ಬಳಸಿಕೊಳ್ಳುವಂತಾಗಬೇಕು. ಗ್ರಂಥಾಲಯ ಅಧ್ಯಯನದಿಂದ ಹೆಚ್ಚಿನ ಜ್ಞಾನ ಸಂಪಾಧಿಸಲು ಅನುಕೂಲವಾಗಲಿದೆ. ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಉಪನ್ಯಾಸಕರಾದ ಚಿದಾನಂದ, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ಬಾಳಾಡಿ ದಿಲೀಪ್ ಕುಮಾರ್ ಇದ್ದರು. ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್ ಸ್ವಾಗತಿಸಿದರು. ಯುವ ಒಕ್ಕೂಟದ ಸದಸ್ಯರಾದ ಸಾಬಾ ಸುಬ್ರಮಣಿ ನಿರೂಪಿಸಿದರು, ನವೀನ್ ದೇರಳ ವಂದಿಸಿದರು.