ಮಡಿಕೇರಿ ಜ.13 NEWS DESK : ಸ್ವಂತ ನೆಲೆ ಇಲ್ಲದೆ ಸಂಕಷ್ಟದ ಬದುಕು ನಡೆಸುತ್ತಿರುವ ಶೋಷಿತ ಸಮಾಜವನ್ನು ಕಡೆಗಣಿಸಿ, ಉಳ್ಳವರಿಗೆ ಅನುಕೂಲ ಕಲ್ಪಿಸಲು ಜಾರಿಗೆ ತಂದಿರುವ ‘ಭೂ ಗುತ್ತಿಗೆ ಆದೇಶ’ವನ್ನು ರಾಜ್ಯ ಸರಕಾರ ಹಿಂತೆಗೆದುಕೊಳ್ಳಬೇಕೆಂದು ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಸರಕಾರದ ಆದೇಶವನ್ನು ವಿರೋಧಿಸಿ ಜ.17ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಂದು ಬೆಳಗ್ಗೆ 11 ಗಂಟೆಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ನಂತರ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಭೂ ಗುತ್ತಿಗೆ ಆದೇಶವನ್ನು ಸರಕಾರ ಹಿಂತೆಗೆದುಕೊಳ್ಳದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು. ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು. ಕಳೆದ ಹಲವು ದಶಕಗಳಿಂದ ನಿವೇಶನ ರಹಿತರು ತಮಗೆ ಭೂಮಿ ನೀಡುವಂತೆ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸದ ಸರಕಾರ, ಭೂ ಗುತ್ತಿಗೆ ಆದೇಶದಂತೆ ಉಳ್ಳವರಿಗೆ ಕೇವಲ 1 ಸಾವಿರ ರೂ.ಗಳಂತೆ 30 ವರ್ಷಗಳಿಗೆ ಗುತ್ತಿಗೆ ನೀಡಲು ಮುಂದಾಗುತ್ತಿದ್ದು, ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಉಳ್ಳವರಿಗೆ ಭೂ ಗುತ್ತಿಗೆ ಆದೇಶದಂತೆ ಸರಕಾರಿ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗುವ ಮೂಲಕ, ನಿವೇಶನ ರಹಿತರನ್ನು ಕಡೆಗಣಿಸಿದೆ. ಬಹುಸಂಖ್ಯಾತ ದುಡಿಯುವ ವರ್ಗವಾಗಿರುವ ಶೋಷಿತ ಸಮೂಹ ಕಳೆದ ಚುನಾವಣೆಯಲ್ಲಿ ತನ್ನ ಮತಗಳ ಮೂಲಕ ಕಾಂಗ್ರೆಸ್‍ನ್ನು ಬೆಂಬಲಿಸಿದೆ. ಇದೀಗ ನಮ್ಮ ಬೆಂಬಲದಿಂದ ಆಯ್ಕೆಯಾದ ಜಿಲ್ಲೆಯ ಇಬ್ಬರು ಶಾಸಕರು ಶೋಷಿತ ಸಮೂಹದ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು. ಬಡವರ, ಮಧ್ಯಮ ವರ್ಗದ ಸಾಗುವಳಿಗೆ ಹಕ್ಕುಪತ್ರ ನೀಡಿ, ಫಾರಂ 57, 94 ರಡಿ ಅರ್ಜಿಗಳನ್ನು ಪರಿಗಣಿಸಿ ತಕ್ಷಣ ಹಕ್ಕುಪತ್ರವನ್ನು ನೀಡಬೇಕು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರಕಾರಿ ಜಾಗವನ್ನು ತೆರವುಗೊಳಿಸಿ ಭೂ ಹೀನರಿಗೆ ಮಂಜೂರು ಮಾಡಬೇಕೆಂದು ನಿರ್ವಾಣಪ್ಪ ಆಗ್ರಹಿಸಿದರು. ಹೋರಾಟ ಸಮಿತಿಯ ಸಂಚಾಲಕರು ಹಾಗೂ ಬಹುಜನ ಕಾರ್ಮಿಕ ಸಂಘದ ಪ್ರಮುಖ ಕೆ.ಮೊಣ್ಣಪ್ಪ ಮಾತನಾಡಿ, ಶೋಷಿತ ಸಮೂಹದ ಮೇಲಿನ ದಬ್ಬಾಳಿಕೆ ನಿಂತಿಲ್ಲ, ಬಡವರ್ಗದ ಮಂದಿಗೆ ಮತದಾನದ ಹಕ್ಕೊಂದನ್ನು ಮಾತ್ರ ನೀಡಲಾಗಿದೆ. ಜಿಲ್ಲೆಯಲ್ಲಿ ಸರಕಾರಿ ಭೂಮಿಯ ಲಭ್ಯತೆಯ ಬಗ್ಗೆ ಇಲ್ಲಿಯವರೆಗು ಸಭೆ ನಡೆಸಿಲ್ಲವೆಂದು ಆರೋಪಿಸಿದರು. ದಲಿತರು ಹಾಗೂ ಶೋಷಿತ ಸಮೂಹದ ನಿವೇಶನದ ಬೇಡಿಕೆಯ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಬೇಕೆಂದು ಒತ್ತಾಯಿಸಿದರು. ಸಮಿತಿಯ ಸಂಚಾಲಕರು ಹಾಗೂ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಪ್ರಮುಖ ರಮೇಶ್ ಮಾಯಮುಡಿ ಮಾತನಾಡಿ, ಜಿಲ್ಲೆಯಲ್ಲಿ 16 ಸಾವಿರ ನಿವೇಶನ ರಹಿತರಿದ್ದು, ಇವರಿಗೆ ಭೂ ಗುತ್ತಿಗೆ ಆದೇಶ ಮಾರಕವಾಗಿದೆ. ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರು ಹಾಗೂ ದಸಂಸ(ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್.ಗೋವಿಂದಪ್ಪ, ಸಂಚಾಲಕರು ಹಾಗೂ ಕಿಸಾನ್ ಸಭಾಧ ಜಿಲ್ಲಾಧ್ಯಕ್ಷ ಹೆಚ್.ಎ.ಪ್ರಕಾಶ್ ಉಪಸ್ಥಿತರಿದ್ದರು.