ಮಡಿಕೇರಿ ಜ.13 NEWS DESK : ಸುಂಟಿಕೊಪ್ಪದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಜ.19 ರಂದು ‘ಗುರು ಶಿಷ್ಯರ ಸಮ್ಮಿಲನ ಮತ್ತು ಸ್ನೇಹ ಸಂಗಮ’ ಕಾರ್ಯಕ್ರಮ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಆರ್.ಹೆಚ್.ಶರೀಫ್ ಸುಂಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ 1200 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಂಘದ ಸದಸ್ಯರಾಗಿದ್ದು, ಇದೀಗ ಹಳೇ ವಿದ್ಯಾರ್ಥಿಗಳು ಒಗ್ಗೂಡಿ ತಮಗೆ ಶಿಕ್ಷಣವನ್ನು ಧಾರೆ ಎರೆದ ಶಿಕ್ಷಕ ವರ್ಗವನ್ನು ಗೌರವಿಸುವ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದರು. ಅಂದು ಬೆಳಗ್ಗೆ 10.30 ಗಂಟೆಗೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಿಂದ ಹಳೇ ವಿದ್ಯಾರ್ಥಿಗಳು, ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ನೂರಕ್ಕೂ ಹೆಚ್ಚಿನ ಶಿಕ್ಷಕರನ್ನು ಒಳಗೊಂಡ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಅಯ್ಯಪ್ಪ ದೇವಸ್ಥಾನದ ಮೂಲಕ ಕೆಇಬಿವರೆಗೆ ತೆರಳಿ ಅದೇ ಮಾರ್ಗವಾಗಿ ಮೈದಾನಕ್ಕೆ ಹಿಂದಿರುಗಲಿದೆ. ಮೆರವಣಿಗೆಯಲ್ಲಿ ದಕ್ಷಿಣ ಕನ್ನಡದ ಗೊಂಬೆ ಕುಣಿತ, ಕೇರಳದ ಚೆಂಡೆ ವಾದ್ಯ, ಮೈಸೂರು ಬ್ಯಾಂಡ್ ತಂಡಗಳು ಪಾಲ್ಗೊಳ್ಳಲಿವೆ. ಆಕರ್ಷಕ ಮೆರವಣಿಗೆ ಬಳಿಕ ಮಧ್ಯಾಹ್ನ 1.30 ಗಂಟೆಗೆ ಆಯೋಜಿತ ಗುರುವಂದನಾ ಕಾರ್ಯಕ್ರಮದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳಾದ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಂ.ಜಿ.ಶುಕುರ್ ಕಮಾಲ್, ತಹಸೀಲ್ದಾರ್ ಮಹೇಶ್ ಸೇರಿದಂತೆ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಶಿಕ್ಷಕರುಗಳಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಗೆ ಸ್ಥಳ ದಾನ ಮಾಡಿದ, ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಾದ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್, ಕಾಫಿ ಬೆಳೆಗಾರರಾದ ವಿನೋದ್ ಶಿವಪ್ಪ ಮತ್ತು ಆನಂದ್ ಬಸಪ್ಪ ಅವರನ್ನು ಹಾಗೂ ಪಟ್ಟೆಮನೆ ಮತ್ತು ಪಾಂಡಂಡ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎ.ಉಸ್ಮಾನ್, ಖಜಾಂಚಿ ಮಹೀಂದ್ರ ಸಿ., ಸಲಹೆಗಾರರುಗಳಾದ ಕೆ.ಎಂ.ರಜಾಕ್, ಜಿ.ಪಿ.ಅನಿಲ್ ಕುಮಾರ್ ಹಾಗೂ ಎಸ್.ಪಿ.ಸಂದೀಪ್ ಕುಮಾರ್ ಉಪಸ್ಥಿತರಿದ್ದರು.