


ಕುಶಾಲನಗರ ಫೆ.12 NEWS DESK : ಕುಶಾಲನಗರ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ. ಸಭೆಯು ಕೂಡುಮಂಗಳೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸರಕಾರದ ಎಲ್ಲಾ ಇಲಾಖೆಯ ಸಂಪೂರ್ಣವಾದ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ಸಂಬಂಧಿಸಿದ ಇಲಾಖೆಯವರು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಸಭೆಗೆ ಬರದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಕಾರ್ಯನಿರ್ವಾಹಣಾಧಿಕಾರಿಗೆ ಸೂಚಿಸಿದರು. ಆಹಾರ ಇಲಾಖೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿರುವ ನ್ಯಾಯ ಬೆಲೆ ಅಂಗಡಿಗಳಿಗೆ ಪಡಿತರ ವಸ್ತುಗಳ ಫಲಾನುಭವಿಗಳಿಗೆ ವಿತರಣೆ ಅಗುವ ಬಗ್ಗೆ ಮತ್ತು ಪಡಿತರ ಚೀಟಿಯ ವ್ಯವಸ್ಥೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಾಲ್ಲೂಕು ಅಹಾರ ನಿರೀಕ್ಷಣಾಧಿಕಾರಿ ಸಭೆಗೆ ಮಾಹಿತಿ ಒದಗಿಸಿದರು. ಹಿರಿಯ ಕಾರ್ಮಿಕ ಇಲಾಖೆ ಅಧಿಕಾರಿ ಸಭೆಗೆ ಬರದೆ ಸಹಾಯಕ ಅಧಿಕಾರಿಯನ್ನು ಕಳುಹಿಸಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ವಿಭಾಗದ ಕಾರ್ಮಿಕರಿಗೆ ಸಂಪೂರ್ಣವಾದ ಮಾಹಿತಿಯನ್ನು ಮತ್ತು ಸರಕಾರದ ಹಣವನ್ನು ವಿವಿದ ವಿಭಾಗದ ಸೌಲಭ್ಯಗಳಿಗೆ ನೀಡಿದ ವರದಿಯನ್ನು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾರ್ಯಾಗಾರವನ್ನು ಇಲಾಖೆ ಮೂಲಕ ಕೈಗೊಳ್ಳುವಂತೆ ಸಭೆಯಲ್ಲಿ ಶಾಸಕರು ಸೂಚನೆ ನೀಡಿದರು. ಅಲ್ಲದೇ ಸಂಬಂಧಿಸಿದ ಇಲಾಖೆ ಎಲ್ಲಾ ಅಧಿಕಾರಿ ವರ್ಗದವರು ಗ್ರಾಮ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದರು. ಉಪ ನೊಂದಣಾಧಿಕಾರಿ ಸಭೆಗೆ ಮಾಹಿತಿಯನ್ನು ನೀಡುವ ಸಂದರ್ಭದಲ್ಲಿ ಕುಶಾಲನಗರ ತಾವರೆ ಕೆರೆ ಒತ್ತುವರಿ ಅಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರ, ಅಧಿಕಾರಿ ಮಾಹಿತಿಯನ್ನು ನೀಡುವ ಸಂದರ್ಭದಲ್ಲಿ ಭೂಪರಿವರ್ತನ ಕಡಿತ, ಮತ್ತು ಕಟ್ಟಡ ಪರವಾನಿಗೆ ಸೇರಿದಂತೆ ಯೋಜನಾ ಪ್ರಾಧಿಕಾರ ಮಾಹಿತಿಯನ್ನು ಸಭೆಗೆ ಒದಗಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಇಂಧೂದಾರ್ ತಾಲ್ಲೂಕು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದರು. ಆಸ್ಪತ್ರೆಯಲ್ಲಿ ಔಷಧಗಳ ದಾಸ್ತಾನು, ಮತ್ತು ಬೇಡಿಕೆಯ ಅನುಗುಣವಾಗಿ ಕಾರ್ಯನಿರ್ವಾಹಣೆ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗಳಿಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಶಾಸಕರು ತಿಳಿಸಿದರು. ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಅಧಾರದ ಮೇಲೆ ಅಧಿಕಾರಿ, ಮತ್ತು ಸಿಬ್ಬಂದಿಗಳ ನೇಮಕ ಸಂದರ್ಭದಲ್ಲಿ ಸ್ಥಳೀಯರಿಗೆ ಅಧ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಪ್ರಮುಖವಾಗಿ ಪೋಲಿಸ್, ಇಲಾಖೆ, ಅಬಕಾರಿ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, 2024-25 ನೇ ಸಾಲಿನ ಶಿಕ್ಷಣ ಇಲಾಖೆಯ ಮಾಹಿತಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಕೃಷಿ ಇಲಾಖೆ, ಶಿಶು ಕಲ್ಯಾಣ ಯೋಜನಾ ಇಲಾಖೆ ಪಶುಪಾಲನಾ ಇಲಾಖೆ, ಮೀನುಗಾರಿಕೆ ಇಲಾಖೆ, ಸೇರಿದಂತೆ ಗ್ರಾಮೀಣ ಕುಡಿಯುವ ನೀರು, ಮತ್ತು ನೈರ್ಮಲ್ಯ ಉಪ ವಿಭಾಗ ಇಂಜಿನಿಯರ್ ಸೇರಿದಂತೆ ನೀರಾವರಿ ಇಲಾಖೆ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಶಾಸಕರ ಸಮ್ಮುಖದಲ್ಲಿ ನಡೆದ ಸಭೆಗೆ ಇಲಾಖೆಯ ಮಾಹಿತಿಯನ್ನು ಒದಗಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತಿಗಳ ಪ್ರಗತಿ ಪರಿಶೀಲನೆ, ಸೇರಿದಂತೆ ವಿವಿಧ ಇಲಾಖೆಯ ಅನುಷ್ಠಾನದ ಪ್ರಗತಿ ಪರಿಶೀಲನೆ ಸೇರಿದಂತೆ ಹಲವಾರು ಅಭಿವೃದ್ಧಿ ಪೂರಕವಾದ ವಿಚಾರಗಳ ಚರ್ಚೆಗಳು ನಡೆದವು. ಸಭೆಯಲ್ಲಿ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ತಾಲ್ಲೂಕು ತಹಶಿಲ್ದಾರರ ಕಿರಣ್ ಗೌರಯ್ಯ, ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಪರಮೇಶ್ ಕುಮಾರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆ.ಡಿ.ಪಿ. ಸಭೆಯ ನಾಮ ನಿರ್ದೇಶಕ ರಾದ ಟಿ.ಪಿ. ಹಮೀದ್, ಟಿ.ಬಿ. ಜಗದೀಶ್, ಜ್ಯೋತಿ ನಾಗರಾಜು, ಕೆ.ಎನ್. ಅಶೋಕ್, ಹನೀಫ್, ಸೇರಿದಂತೆ ತಾಲ್ಲೂಕು ಮಟ್ಟದ ಹಲವಾರು ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.