ಮಡಿಕೇರಿ ಫೆ.14 NEWS DESK : ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡ ಜಾನುವಾರುಗಳ ರಕ್ಷಣೆಗಾಗಿ ಪ್ರಾರಂಭಿಸಿದ ಶ್ರೀಕೃಷ್ಣ ಗೋ ಶಾಲೆ ಆರು ವರ್ಷಗಳನ್ನು ಪೂರೈಸಿದ್ದು, ಇದೀಗ ಜಾಗ ಹಾಗೂ ಮೇವಿನ ಕೊರತೆಯನ್ನು ಎದುರಿಸುತ್ತಿದೆ. ದಾನಿಗಳು ಗೋವುಗಳಿಗೆ ಮೇವು ನೀಡುವ ಮೂಲಕ ಸಹಕರಿಸುವಂತೆ ಗೋಶಾಲೆ ಸ್ಥಾಪಕಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡ ಜಾನುವಾರುಗಳ ರಕ್ಷಣೆಗಾಗಿ ಜಾಗವನ್ನು ಗುತ್ತಿಗೆಗೆ ಪಡೆದು ಶ್ರೀಕೃಷ್ಣ ಗೋಶಾಲೆಯನ್ನು ಆರಂಭಿಸಲಾಯಿತು. ದಾನಿಗಳ ಸಹಕಾರದಿಂದ ಗೋಶಾಲೆ ಮುನ್ನಡೆಯುತ್ತಿತ್ತಾದರು 2 ವರ್ಷಗಳ ಕೋವಿಡ್ ಪರಿಸ್ಥಿತಿಯಿಂದ ಅಭಿವೃದ್ಧಿ ಕುಂಟಿತಗೊಂಡಿತು ಎಂದರು. ಗೋವುಗಳ ಮೇವು, ಹಿಂಡಿ, ಔಷಧಿ, ಕಾರ್ಮಿಕರ ಸಂಬಳ, ಗೋಶಾಲೆ ನಡೆಸುವ ಜಾಗದ ಬಾಡಿಗೆ ಇತ್ಯಾದಿಗಳನ್ನು ಪೂರೈಸಲು ದಾನಿಗಳು ನೀಡುವ ದೇಣಿಗೆಯ ಕೊರತೆಯಿಂದಾಗಿ ಸಾಲ ಮಾಡಿ ಗೋಶಾಲೆ ನಡೆಸುವಂತಾಗಿದೆ. ಪ್ರತಿ ತಿಂಗಳು ಒಂದು ಲಕ್ಷದ ಇಪ್ಪತ್ತು ಸಾವಿರ ರೂ.ಗಳು ಖರ್ಚಾಗುತ್ತಿದೆ. ಆದ್ದರಿಂದ ದಾನಿಗಳು ತಿಂಗಳಿಗೆ ಕನಿಷ್ಟ ರೂ.100 ನ್ನಾದರು ನೀಡಿ ಗೋವುಗಳಿಗೆ ಮೇವು ಒದಗಿಸಲು ಸಹಕರಿಸುವಂತೆ ಮನವಿ ಮಾಡಿದರು. ಈಗ ನಮ್ಮ ಗೋಶಾಲೆಗೆ ಕೊಡಗಿನಿಂದ ಕೇವಲ 1,500 ರೂ. ಮಾತ್ರ ದೇಣಿಗೆ ಬರುತ್ತಿದೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಗೋವು ದತ್ತು ಯೋಜನೆ ಮೂಲಕ ಸ್ವಲ್ಪ ಪ್ರಮಾಣದ ಹಣ ಗೋಶಾಲೆಗೆ ಬಿಡುಗಡೆಯಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರಕಾರ ಗೋಶಾಲೆಗೆ ಒಂದು ರೂಪಾಯಿಯನ್ನು ಕೂಡ ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿದರು. ಜಿಲ್ಲೆಯ ಸಂಪಾಜೆ, ಮಡಿಕೇರಿ ಮತ್ತು ಕುಶಾಲನಗರ ರಸ್ತೆಗಳಲ್ಲಿ ಕೆಲವರು ಗೋವುಗಳನ್ನು ಬಿಟ್ಟು ಹೋಗುತ್ತಿದ್ದು, ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ವಾಹನಗಳಿಂದ ಅಪಘಾತಕ್ಕೊಳಗಾಗಿ ಮೃತಪಡುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಗೋರಕ್ಷಕರು ಹಾಗೂ ಪೊಲೀಸ್ ಇಲಾಖೆ ವಶಪಡಿಸಿಕೊಂಡ ಗೋವುಗಳನ್ನು ಕೊಡಗಿನ ಶ್ರೀಕೃಷ್ಣ ಗೋಶಾಲೆಗೆ ಅಥವಾ ಹೊರಗಿನ ಗೋಶಾಲೆಗಳಲ್ಲಿ ಬಿಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೊರ ಜಿಲ್ಲೆಯ ಗೋಶಾಲೆಗಳಲ್ಲಿ ಗೋವುಗಳನ್ನು ಸ್ವೀಕರಿಸದೆ ನಿಮ್ಮ ಜಿಲ್ಲೆಯಲ್ಲಿಯೇ ಬಿಡಿ ಎಂದು ಹೇಳಿ ಕಳುಹಿಸಲಾಗುತ್ತಿದೆ. ಕೊಡಗಿನಲ್ಲಿ ಗೋವುಗಳನ್ನು ಪಾಲನೆ ಮಾಡಲು ಜಾಗವಿಲ್ಲದಾಗ ಪೊಲೀಸ್ ಇಲಾಖೆಯವರು ವಶಪಡಿಸಿಕೊಂಡ ಗೋವುಗಳನ್ನು ಎಲ್ಲಿ ಬಿಡಲು ಸಾಧ್ಯ ಎಂದು ಪ್ರಶ್ನಿಸಿದರು. ಮಡಿಕೇರಿಯಲ್ಲಿ ಸರಕಾರದ ಗೋಶಾಲೆ ಇದ್ದರೂ ಸಾರ್ವಜನಿಕರು, ರೈತರು ತಮಗೆ ಸಾಕಲು ಅಸಾಧ್ಯವಾದ ಗೋವುಗಳನ್ನು ಬಿಡಲು ಆಗುತ್ತಿಲ್ಲ. ಅದು ಕೇವಲ 40 ಗೋವುಗಳಿಗೆ ಮಾತ್ರ ಸೀಮಿತವಾಗಿದ್ದು, ಕೊಡಗಿನ ಇತರ ಪ್ರದೇಶಗಳ ಗೋಮಾಳದ ಜಾಗ ಒತ್ತುವರಿಯಾಗುತ್ತಿದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಮತ್ತು ಗೋ ಶಾಲೆಗಳಿಗೆ ಗೋಮಾಳವನ್ನು ನೀಡುವಂತೆ ಮನವಿ ಮಾಡಿದರೆ ಕೊಡಲು ಸಾಧ್ಯವಿಲ್ಲ ಎನ್ನುವ ಉತ್ತರ ಬರುತ್ತಿದೆ ಎಂದು ಹರೀಶ್ ಜಿ.ಆಚಾರ್ಯ ಆರೋಪಿಸಿದರು. ಗೋಮಾಳದ ಜಾಗವನ್ನು ಷರತ್ತುಗಳೊಂದಿಗೆ ಗೋ ಶಾಲೆ ನಡೆಸುವವರಿಗೆ ಗುತ್ತಿಗೆ ನೀಡುವ ಮೂಲಕ ಗೋವುಗಳ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು. ಇಲ್ಲವಾದಲ್ಲಿ ಗೋವುಗಳ ರಕ್ಷಣೆಗಾಗಿ ನಾವುಗಳು ಕೂಡ ಗೋಮಾಳ ಅಥವಾ ಸರಕಾರಿ ಜಾಗದಲ್ಲಿ ಗೋವುಗಳನ್ನು ಕಟ್ಟಿ ಹಾಕಿ, ಬೇಲಿ ನಿರ್ಮಿಸಿ ಗೋಶಾಲೆಯನ್ನು ಆರಂಬಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಹಿಂದೆ ಶ್ರೀ ಕೃಷ್ಣ ಗೋ ಶಾಲೆಯನ್ನು ಶ್ರೀ ವಿಶ್ವಕರ್ಮ ಸಮುದಾಯ ಜಾಗೃತಾ ಸೇವಾ ಟ್ರಸ್ಟ್ ಮೂಲಕ ನೋಂದಣಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಶ್ರೀ ಕೃಷ್ಣ ಗೋ ಶಾಲೆ ಟ್ರಸ್ಟ್ ಕೊಡಗು ಜಿಲ್ಲೆ ಹೆಸರಿನಲ್ಲಿ ನೋಂದಾಯಿಸಲಾಗುವುದು ಎಂದರು. ಗೋಶಾಲಾ ಟ್ರಸ್ಟ್ ಬ್ಯಾಂಕ್ ಖಾತೆ ವಿವರ : A/C NO : 897310210000001, IFSC : BKID0008973, BANK OF INDIA MADIKERI BRANCH, MOB NO : 7899260138 ಸಹಾಯ ಮಾಡಿದವರು ವ್ಯಾಟ್ಸಾಪ್ ನಂಬರ್ 9164857163ಗೆ ವಿವರ ಕಳುಹಿಸಿ ರಶೀದಿ ಪಡೆಯುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಸೋಮನಾಥ್ ಸುಂಟಿಕೊಪ್ಪ, ಚೌರಿರ ರಮೇಶ್, ಪಳಂಗಂಡ ಈಶ್ವರ್, ಬಿ.ಕೆ.ಚಂದ್ರಶೇಖರ್ ಹಾಗೂ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.











