![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
![](https://newsdeskkannada.com/wp-content/uploads/2025/02/Z-GL-2-8.jpg)
ಮಡಿಕೇರಿ NEWS DESK ಫೆ.14 : ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ “ಸಂಘ” ವರ್ಚುವಲ್ ಇಂಟ್ಯಾಂಜಿಬಲ್ (ಅದೃಶ್ಯ) ಮತ ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಿ ಕೊಡವರ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ “ಸಂಘ” ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರಿಗೆ ಕೊಡವ ಸಂಪ್ರದಾಯಿಕ ಜನ್ಮಭೂಮಿಯಲ್ಲಿ ಪ್ರತ್ಯೇಕ ಲೋಕಸಭೆ ಮತ್ತು ಅಸಂಬ್ಲಿ ಕೊಡವ ಮತ ಕ್ಷೇತ್ರವನ್ನು ರಚಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. 2026ರಲ್ಲಿ ಸಂಸತ್ತಿನ ಮತ್ತು ಅಸೆಂಬ್ಲಿಯ ಕ್ಷೇತ್ರದ ಗಡಿ ಹಾಗೂ ಸಂಖ್ಯೆ ಪುನರ್ ನಿರ್ಣಯಿಸಲಾಗುತ್ತಿದ್ದು, ಇದಕ್ಕಾಗಿ ಪ್ರಕ್ರಿಯೆಯು ಪ್ರಾರಂಭವಾಗಿದೆ. ರಾಜ್ಯದಲ್ಲಿ ಗರಿಷ್ಠ ಪ್ರಾತಿನಿಧ್ಯವನ್ನು ಹೊಂದಿರುವ ಜನಸಂಖ್ಯಾ ಪ್ರಾಬಲ್ಯದ ಕೂಟ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ನಿರ್ಮಿಸುವ ನೆಪದಲ್ಲಿ ಸುಳ್ಯ ತಾಲ್ಲೂಕನ್ನು ಕೊಡಗಿಗೆ ಸೇರಿಸಿ ಪ್ರತ್ಯೇಕ ಕೊಡಗು ಲೋಕಸಭಾ ಕ್ಷೇತ್ರ ನಿರ್ಮಿಸಿ ಶಾಶ್ವತವಾಗಿ ತಾವು ಸಂಸತ್ ಪ್ರಾತಿನಿಧ್ಯ ಪಡೆಯುವುದರೊಂದಿಗೆ ಸಂಸತ್ತಿನಲ್ಲಿ ಕೊಡವರಿಗೆ ಪ್ರಾತಿನಿಧ್ಯ ದಕ್ಕದಂತೆ ಒಳಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು. 2023 ಮತ್ತು 2024 ರಲ್ಲಿ ಸಿಎನ್‌ಸಿ ಸತ್ಯಾಗ್ರಹ ನಡೆಸುವ ಮೂಲಕ ಸಾಂಕೇತಿಕವಾಗಿ ಈ ವಿಷಯವನ್ನು ಪ್ರಸ್ತಾಪಿಸಿತು. ಫೆ.3ರಂದು ಸಿಎನ್‌ಸಿ ಕಾರ್ಯಕರ್ತರು ಪವಿತ್ರ ಕೊಡವ ಯಾತ್ರಾಸ್ಥಳವಾದ ತಲಕಾವೇರಿಯಲ್ಲಿ ಪುಣ್ಯ ಪ್ರಾರ್ಥನೆಯ ಮೂಲಕ ಪ್ರತಿಜ್ಞೆ ಮಾಡಿ ಜನರ ಮಂಜೂರಾತಿಯನ್ನು ಪಡೆಯಲು ಕೊಡವಲ್ಯಾಂಡ್ ನಾದ್ಯಂತ ವರ್ಷವಿಡೀ ಪ್ರಚಾರ ಕಾರ್ಯಕ್ಕಾಗಿ ದೈವಿಕ ಜೀವಜಲ ಕಾವೇರಿ ನದಿಯಿಂದ ಆಶೀರ್ವಾದ ಪಡೆದಿದ್ದೇವೆ ಎಂದರು.
ಐತಿಹಾಸಿಕವಾಗಿ, ಕೊಡವರು 1946 ರಿಂದ 1950 ರವರೆಗೆ ಭಾರತದ ಸಂವಿಧಾನ/ರಾಜ್ಯಾಂಗ ಘಟನಾ ಸಭೆಯಲ್ಲಿ ಪ್ರಾತಿನಿಧ್ಯವನ್ನು ಹೊಂದಿದ್ದರು. ಆದರೆ ಅವರ ಸಾಂಪ್ರದಾಯಿಕ ತಾಯ್ನಾಡಿನ ವಿಲೀನದ ನಂತರ ಅದನ್ನು ಕಳೆದುಕೊಂಡರು. ತಮ್ಮ ಅತೀ ಕಡಿಮೆ ಜನಸಂಖ್ಯೆಯ ಹೊರತಾಗಿಯೂ, ಕೊಡವರು ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ ಎಂದು ಗಮನ ಸೆಳೆದರು. ಸಾಂಪ್ರದಾಯಿಕ ತಾಯ್ನಾಡಿನ ವಿಲೀನದ ನಂತರ ಕೊಡವರು ಎಲ್ಲಾ ರೀತಿಯಲ್ಲೂ ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಂಡಿದ್ದಾರೆ. ನಮ್ಮ ಅತ್ಯಲ್ಪ ನಗಣ್ಯ ಜನಸಂಖ್ಯೆಯ ಕಾರಣದಿಂದ ತಾರತಮ್ಯಕ್ಕೆ ಒಳಗಾಗಿದ್ದೇವೆ, ಅಂಚಿನಲ್ಲಿದ್ದೇವೆ, ನಿರ್ಲಕ್ಷಿಸಲ್ಪಟ್ಟಿದ್ದೇವೆ, ಅಗೌರವಗೊಂಡಿದ್ದೇವೆ, ಕಡೆಗಣಿಸಲ್ಪಟ್ಟಿದ್ದೇವೆ. ಆದಿಮಸಂಜಾತ ಕೊಡವರ ಸಂಖ್ಯೆ ಸೂಕ್ಷ್ಮವಾಗಿದ್ದರೂ, ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರೀಯ ನಿರ್ಮಾಣಕ್ಕೆ ನಮ್ಮ ಕೊಡುಗೆ ಅಪಾರವಾಗಿದೆ. ಪ್ರತಿ ಕುಟುಂಬದ ಕನಿಷ್ಠ ಒಂದು ಸದಸ್ಯರು ರಕ್ಷಣಾ ಸೇವೆಯಲ್ಲಿದ್ದಾರೆ. ಸಮುದಾಯದ ಜನಸಂಖ್ಯೆಯ ಪ್ರಕಾರ, ರಕ್ಷಣೆಗೆ ಅವರ ಕೊಡುಗೆಯ ಅನುಪಾತವು ವಿಶ್ವದಲ್ಲೇ ಅತ್ಯಧಿಕವಾಗಿದೆ. ಕುಟುಂಬ ಯೋಜನೆ ಅಳವಡಿಸಿಕೊಳ್ಳುವ ಮೂಲಕವೂ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವ ಮೊದಲ ಜನರು ನಾವು. ಆ ಮೂಲಕ ನಾವು ನಮ್ಮ ರಾಷ್ಟç ನಿರ್ಮಾಣ ಮತ್ತು ಅದರ ಪ್ರಗತಿಗೆ ಕೊಡುಗೆ ನೀಡಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಮುದಾಯವು 10 ಮಕ್ಕಳನ್ನು ಹೊಂದಿರುವ ತಾಯಂದಿರನ್ನು ಗೌರವಿಸುತ್ತಿತ್ತು. ಕೊಡವ ಪರಂಪರೆಯಲ್ಲಿ ಹೆಚ್ಚು ಮಕ್ಕಳನ್ನು ಹೊಂದುವುದು ಘೋಷಿತ ಸಂಪ್ರದಾಯವಾಗಿತ್ತು, ಆದರೆ ನಮ್ಮ ರಾಷ್ಟçದ ಸಲುವಾಗಿ ನಾವು ಕಡ್ಡಾಯವಾಗಿ ಜನನ ನಿಯಂತ್ರಣವನ್ನು ಅಳವಡಿಸಿಕೊಂಡಿದ್ದೇವೆ ಮತ್ತು ಈಗ ಜನರು ಕೇವಲ ಒಂದು ಅಥವಾ ಎರಡು ಮಕ್ಕಳನ್ನು ಹೊಂದಿದ್ದಾರೆ. ಪ್ರಸ್ತುತ ಸರ್ಕಾರವು ಜನಸಂಖ್ಯೆಯ ಆಧಾರದ ಮೇಲೆ ವಿಧಾನಸಭೆ ಮತ್ತು ಸಂಸತ್ತನ್ನು ಮರುಹೊಂದಿಸುತ್ತಿದೆ ಮತ್ತು ಇದು ಮತ್ತೊಂದು ರೀತಿಯಲ್ಲಿ ಸರ್ಕಾರವು ದೇಶದ ಒಳಿತಿಗಾಗಿ ಜನಸಂಖ್ಯಾ ನಿಯಂತ್ರಣ ಮಾಡಿದ ಕಾರಣಕ್ಕಾಗಿ ದೇಶಭಕ್ತ ಕೊಡವರ ಸಂಸತ್ತಿನ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಮೂಲಕ ಶಿಕ್ಷಿಸುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆದಿಮಸಂಜಾತ ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕುಗಳಿಗಾಗಿ ಸಂವಿಧಾನ 371 ಮತ್ತು 244 ವಿಧಿ ಹಾಗೂ 6ನೇ ಮತ್ತು 8ನೇ ಶೆಡ್ಯೂಲ್, ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶ್ವ ರಾಷ್ಟç ಸಂಸ್ಥೆಯ ಇಂಡಿಜಿನಸ್ ಹಕ್ಕುಗಳ ಮಾನ್ಯತೆ ಮತ್ತು ಸಂವಿಧಾನದ 340-342 ವಿಧಿಗಳ ಅಡಿಯಲ್ಲಿ ಆದಿಮಸಂಜಾತ ಕೊಡವರಿಗೆ ಆದಿಮ ಬುಡಕಟ್ಟು ವರ್ಗೀಕರಣ ಹಾಗೂ ನಮ್ಮ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರಕ್ಕೆ ಸಂವಿಧಾನದ ವಿಶೇಷ ಖಾತರಿಗಾಗಿ ಒತ್ತಾಯಿಸಿದರು.
ಕಲಿಯಂಡ ಮೀನಾ ಕಾರ್ಯಪ್ಪ, ರೇಖಾ ನಾಚಪ್ಪ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಮುದ್ದಿಯಾಡ ಲೀಲಾವತಿ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಮಂದಪಂಡ ಮನೋಜ್, ಬೇಪಡಿಯಂಡ ದಿನು, ಕಿರಿಯಮಾಡ ಶರಿನ್, ಪುಲ್ಲೇರ ಕಾಳಪ್ಪ, ಅಪ್ಪೇಂಗಡ ಮಾಲೆ, ಕಾಟುಮಣಿಯಂಡ ಉಮೇಶ್, ಚಂಗಂಡ ಚಾಮಿ ಪಳಂಗಪ್ಪ, ಚಿಯಬೇರ ಸತೀಶ್, ನಂದಿನೆರವಂಡ ವಿಜು, ನಂದಿನೆರವಂಡ ಅಪ್ಪಯ್ಯ, ಬಾಚಿನಾಡಂಡ ಗಿರೀಶ್, ಅಪ್ಪಾರಂಡ ಪ್ರಸಾದ್, ತೋಲಂಡ ಸೋಮಯ್ಯ, ಕೂಪದಿರ ಸಾಬು, ಪುಟ್ಟಿಚಂಡ ಡಾನ್, ಮಣವಟ್ಟಿರ ಚಿಣ್ಣಪ್ಪ, ಚೋಳಪಂಡ ನಾಣಯ್ಯ, ಅಜ್ಜಿನಿಕಂಡ ಸನ್ನಿ, ಬೊಳ್ಳಜಿರ ಅಯ್ಯಪ್ಪ, ನಂದೇಟಿರ ರವಿ, ಅಚ್ಚಕಾಳೇರ ಸುರೇಶ್, ಸಾದೇರ ರಮೇಶ್ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಜ್ಞಾಪನಾ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರಕಾರಕ್ಕೆ ಸಲ್ಲಿಸಿದರು.