ಮಡಿಕೇರಿ ಜೂ.4 NEWS DESK : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕಿನಲ್ಲಿ ಹೆಚ್ಚು ಅಂಕ ಗಳಿಸಿದರೆ ಮಾತ್ರ ಸಾಲದು, ಉತ್ತಮ ಸಂಸ್ಕೃತಿಯನ್ನು ಕೂಡ ಮೈಗೂಡಿಸಿಕೊಳ್ಳಬೇಕು ಎಂದು ಹಿಂದೂ ಮಲಯಾಳಿ ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್.ರಮೇಶ್ ಅವರು ಕರೆ ನೀಡಿದ್ದಾರೆ. ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ನಗರದಲ್ಲಿ ನಡೆದ 1 ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣ ಎಲ್ಲರಿಗೂ ಅಗತ್ಯವಿದೆ, ಶಿಕ್ಷಣದೊಂದಿಗೆ ಮಕ್ಕಳು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ 10ನೇ ತರಗತಿಯಿಂದಲೇ ಮನೆ ಕೆಲಸದಿಂದ ಆರಂಭಗೊಂಡು ಎಲ್ಲಾ ಚಟುವಟಿಕೆಗಳನ್ನು ಮನವರಿಕೆ ಮಾಡಿಕೊಡಬೇಕು. ದೈಹಿಕ ಮತ್ತು ಮಾನಸಿಕವಾಗಿ ವಿಕಸನ ಹೊಂದಲು ಮಾರ್ಗದರ್ಶನ ಮಾಡಬೇಕೆಂದು ಕೆ.ಎಸ್.ರಮೇಶ್ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ವಿ.ಧರ್ಮೇಂದ್ರ ಅವರು ಪೋಷಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಮನವರಿಕೆ ಮಾಡುವ ಭರದಲ್ಲಿ ಮಕ್ಕಳಿಗೆ ಮಾನಸಿಕ ಒತ್ತಡ ನೀಡಬಾರದು. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಮೂಲಕ ಶೈಕ್ಷಣಿಕ ಗುರಿ ಸಾಧನೆಗೆ ಮಾನಸಿಕವಾಗಿ ಶಕ್ತಿ ತುಂಬಬೇಕು. ಆಗ ಯಶಸ್ಸಿನ ದಾರಿಯನ್ನು ಮಕ್ಕಳೇ ಕಂಡುಕೊಳ್ಳುತ್ತಾರೆ ಎಂದರು. ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು, ಗುರು ಹಿರಿಯರನ್ನು ಗೌರವಿಸಬೇಕು. ಈ ಕುರಿತು ಮಕ್ಕಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ.ಕೆ.ಸುಧೀರ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದ ಅಮೂಲ್ಯ ಘಟ್ಟವಾದ ಪಿಯುಸಿ ಮುಗಿದ ನಂತರ ಯಾವ ಪದವಿ ಪಡೆಯಬೇಕು ಎನ್ನುವುದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ವಿದ್ಯಾರ್ಥಿಗಳು ಈ ಹಂತದಲ್ಲಿ ತೆಗೆದುಕೊಳ್ಳುವ ನಿಲುವು ಸುಂದರ ಜೀವನಕ್ಕೆ ದಾರಿ ದೀಪವಾಗಲಿದೆ, ಆದ್ದರಿಂದ ಆಯ್ಕೆ ಉತ್ತಮವಾಗಿರಲಿ ಎಂದು ಸಲಹೆ ನೀಡಿದರು. ಸಂಘದ ಸಲಹೆಗಾರ ಟಿ.ಆರ್.ವಾಸುದೇವನ್ ಅವರು ಮಾತನಾಡಿ ಪೋಷಕರು ತಮ್ಮ ದುಡಿಮೆಯ ಕಷ್ಟಸುಖಗಳು ಮತ್ತು ಆಗುಹೋಗುಗಳನ್ನು ಮಕ್ಕಳ ಬಳಿ ಹಂಚಿಕೊಂಡರೆ ಪೋಷಕರ ಬದುಕಿನ ಸಾರ ಮಕ್ಕಳಿಗೆ ಅರ್ಥವಾಗುತ್ತದೆ ಎಂದರು. ಪೋಷಕರ ಕಷ್ಟವನ್ನು ಅರಿತು ಬಾಳುವ ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ಹಾಗೂ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಒಟ್ಟು 93 ಮಕ್ಕಳು ಮಲಯಾಳಿ ಸಂಘ ನೀಡಿದ ಪುಸ್ತಕದ ಪ್ರಯೋಜನವನ್ನು ಪಡೆದುಕೊಂಡರು. ಪ್ರಧಾನ ಕಾರ್ಯದರ್ಶಿ ಅಶೊಕ್ ಎಚ್.ಪಿ, ಉಪಾಧ್ಯಕ್ಷರಾದ ವಿಜಯನ್ ಪಿ., ಗೋಪಿನಾಥ್ ಟಿ.ವಿ, ಖಜಾಂಚಿ ರವಿ ಎಂ.ಪಿ, ಸಹ ಖಜಾಂಚಿ ಸುಬ್ರಮಣಿ ಪಿ.ಬಿ, ಪ್ರಚಾರ ಸಮಿತಿಯ ಅಧ್ಯಕ್ಷ ರವಿ ಅಪ್ಪುಕುಟ್ಟನ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅಂಜಲಿ ಅಶೋಕ್, ನಿರ್ದೇಶಕರುಗಳಾದ ಉಣ್ಣಿ ಪ್ರಕಾಶ್, ಹರೀಶ್ ಕೆ.ಎ, ಮೋಹನ್ ಕೆ.ಕೆ, ರಮೇಶ್ ಎನ್, ಬಾಬು ಓ.ಎನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ನಿರ್ದೇಶಕ ಪ್ರಭಾಕರ್ ಸಿ.ಕೆ ಸ್ವಾಗತಿಸಿದರು.












