ವಿರಾಜಪೇಟೆ ಡಿ.12 NEWS DESK : ರಕ್ತದಾನ ಮಾಡುವುದು ಜೀವ ಉಳಿಸುವ ಪ್ರಕ್ರಿಯೆಯಾಗಿದೆ. ಅದ್ದರಿಂದ ಅರ್ಹರು ರಕ್ತದಾನ ಮಾಡಿ, ಜೀವ ಉಳಿಸಿ ಎಂದು ನಗರ ವರ್ತಕರ ಸಂಘದ ಅಧ್ಯಕ್ಷ, ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ಹೇಳಿದರು. ವಿರಾಜಪೇಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ವತಿಯಿಂದ ಸಾಲುಮರದ ತಿಮ್ಮಕ್ಕ ಅವರ ಸ್ಮರಾಣಾರ್ಥ ವಿರಾಜಪೇಟೆಯ ಪುರಸಭೆ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ್ ಅವರು, ಸಾಲುಮರದ ತಿಮ್ಮಕ್ಕ ಅವರು ಮರಗಿಡಗಳನ್ನು ತನ್ನ ಮಕ್ಕಳಂತೆ ಸಲುಹಿದ ಮಹಾತಾಯಿ. ಅವರ ಸ್ಮರಾಣಾರ್ಥ ರಕ್ತದಾನ ಶಿಬಿರ ಆಯೋಜನೆ ಮಾಡಿ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಯೋಗೇಶ್ ನಾಯ್ಡು ಅವರ ಕಾರ್ಯ ಶ್ಲಾಘನೀಯ. ಅಪಘಾತ ಮತ್ತು ಇನ್ನಿತರ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿಗೆ ಇರುತ್ತದೆ. ಮಾನವ ರಕ್ತಕ್ಕೆ ಪರ್ಯಾಯವಾಗಿ ಇನ್ನಿತರ ಧ್ರವಗಳು ಇಲ್ಲದಿರುವುದರಿಂದ ರಕ್ತಕ್ಕೆ ರಕ್ತವೇ ಪರ್ಯಾಯವಾಗಿದೆ. ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಅವಶ್ಯಕ ರೋಗಿಗಳಿಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ರಕ್ತದಾನ ಶಿಬಿರ ಸಮಾಜಕ್ಕೆ ಮಾದರಿ ಎಂದು ಹೇಳಿದರು. ಸ್ಥಳಿಯರಾದ ಡಿಂಪಲ್ ನಾಚಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬರಿಗೂ ಸಾಮಾಜಿಕ ಕಳಕಳಿ ಇರುವಂತಾಗಬೇಕು. ಆದುದರಿಂದ ಸಂಸ್ಥೆ ಸಮಾಜಕ್ಕೆ ಉಪಯುಕ್ತವಾಗಲೆಂದು ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ. ಸಾರ್ವಜನಿಕರು ನರಳುತ್ತಿರುವ ರೋಗಿಗಳಿಗೆ ರಕ್ತ ನೀಡಿ ಸಹಕರಿಸಿ ಎಂದು ಮನವಿ ಮಾಡಿದರು. ವರ್ತಕರ ಸಂಘದ ಖಜಾಂಚಿ ಆರ್.ಸುರೇಶ್ ಮಾತನಾಡಿ, ಬಳಗದ ಮೂಲಕ ಯೋಗೇಶ್ ನಾಯ್ಡು ಅವರು ಜನಪರ ಕೆಲಸ ಮಾಡಿದ್ದಾರೆ. ರಕ್ತದಾನವು ಶ್ರೇಷ್ಠ ದಾನಗಳಲ್ಲಿ ಒಂದಾಗಿದ್ದು ಮತ್ತೊಂದು ಜೀವವನ್ನು ಉಳಿಸುವ ಪುಣ್ಯ ಕೆಲಸ ಮಾಡಿದಂತೆ ಎಂದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ಯೋಗೇಶ್ ನಾಯ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜನಾರ್ಧನ, ಬಳಗದ ಸದಸ್ಯರುಗಳು, ಮಡಿಕೇರಿ ರಕ್ತನಿಧಿ ಕೆಂದ್ರದ ಕೌನ್ಸಿಲರ್ ಕಾರ್ತಿಕ್, ಗೃಹ ವೈದ್ಯರುಗಳಾದ ದೀಪಕ್, ಡೆನ್ನಿಸ್, ಟಿಕ್ನಿಕಲ್ ಸೂಪರ್‍ವೈಸರ್ ಪೂರ್ಣಿಮ, ಲ್ಯಾಬ್ ಟೆಕ್ನಿಷಿಯನ್ ರಿಕ್ಷಿತ್, ಡಯನಾ, ಕವಿತಾ ಹಾಗೂ ಸಾರ್ವಜನಿಕರು ಹಾಜರಿದ್ದರು. ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.











