ನಾಪೋಕ್ಲು, NEWS DESK ನ.4: ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮತ್ತೆ ಆರಂಭವಾಗಿದ್ದು, ಕದಿರು ಬಿಡುವ ಹಂತದಲ್ಲಿದ್ದ ಭತ್ತದ ಬೆಳೆಯನ್ನು ತುಳಿದು ನಾಶಪಡಿಸಿವೆ. ಇದರಿಂದ ಗ್ರಾಮಸ್ಥರು ಹಾಗೂ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದ ಕೃಷಿಕ ಬಾಳೆಯಡ ಲವ ಬೆಳ್ಳಿಯಪ್ಪ ಅವರ ಭತ್ತದ ಗದ್ದೆಗೆ ದಾಳಿ ನಡೆಸಿದ ಕಾಡಾನೆಗಳ ಹಿಂಡು, ಬೆಳೆದು ನಿಂತಿದ್ದ ಪೈರುಗಳನ್ನು ತುಳಿದು ಹಾಳುಮಾಡಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.
ಈಗಾಗಲೇ ಕೆಲವೇ ರೈತರು ಭತ್ತದ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದು, ಹವಾಮಾನ ವೈಪರೀತ್ಯ, ಕೂಲಿ ಕಾರ್ಮಿಕರ ಕೊರತೆ ಹಾಗೂ ರಸಗೊಬ್ಬರಗಳ ಬೆಲೆ ಏರಿಕೆಯಂತಹ ಸಮಸ್ಯೆಗಳ ನಡುವೆಯೂ ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಭತ್ತದ ಬಿತ್ತನೆ ಮತ್ತು ನಾಟಿ ಸಂದರ್ಭದಲ್ಲಿಯೂ ಕಾಡಾನೆಗಳ ಹಾವಳಿ ಎದುರಾಗಿತ್ತು. ಇದೀಗ ಬೆಳೆ ಉತ್ತಮವಾಗಿ ಬೆಳೆದು ಕದಿರು ಬಿಡುವ ಹಂತ ತಲುಪಿರುವಾಗಲೇ ಆನೆಗಳು ದಾಳಿ ನಡೆಸಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ರಾತ್ರಿ ವೇಳೆಯಲ್ಲಿ ಕಾಡಾನೆಗಳು ಮತ್ತೆ ದಾಳಿ ನಡೆಸಿ ಉಳಿದ ಬೆಳೆಗಳನ್ನೂ ನಾಶಪಡಿಸುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಸೂಕ್ತ ಕಾರ್ಯಾಚರಣೆ ಕೈಗೊಳ್ಳಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಶೀಘ್ರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೃಷಿಕ ಬಾಳೆಯಡ ಲವ ಬೆಳ್ಳಿಯಪ್ಪ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

















