ಮಡಿಕೇರಿ ಫೆ.13 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಮಟ್ಟದ ‘ಮಕ್ಕಳ ಕಲಿಕಾ ಹಬ್ಬ’ ಕ್ಕೆ ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ದೊರೆಯಿತು.
ಮೂರು ದಿನಗಳ ಕಾಲ ನಡೆಯುವ ಕಲಿಕಾ ಹಬ್ಬಕ್ಕೆ ಮೂರ್ನಾಡು ಗ್ರಾ.ಪಂ.ಅಧ್ಯಕ್ಷರಾದ ಸುಜಾತ ಚಂದ್ರಶೇಖರ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಲಿಕಾ ಹಬ್ಬದಿಂದ ಮಕ್ಕಳ ಜ್ಞಾನಾರ್ಜನೆಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
ವಿದ್ಯಾರ್ಥಿಗಳು ಸದಾ ಚಲನಶೀಲತೆ, ಕ್ರೀಯಾಶೀಲತೆಯಿಂದ ಇರಬೇಕು. ಆ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ರೀಯಾಶೀಲತೆ ಬೆಳೆಸಿಕೊಳ್ಳಲು ಕಲಿಕಾ ಹಬ್ಬ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ ಅವರು ಮಾತನಾಡಿ ಸರ್ಕಾರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಹಬ್ಬವನ್ನು ಏರ್ಪಡಿಸಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಕಲಿಕಾ ಹಬ್ಬ ಉತ್ತಮ ವೇದಿಕೆ ಆಗಿದೆ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಚ್.ಎಸ್.ಚೇತನ್ ಅವರು ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಉಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಕಲಿಕಾ ಹಬ್ಬವನ್ನು ಹಮ್ಮಿಕೊಂಡಿದೆ ಎಂದರು.
ಕಲಿಕೆಯನ್ನು ಸಂತಸದಿಂದ ಪಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ ಎಂದರು.
ಮೂರ್ನಾಡು ಸ.ಮಾ.ಪ್ರಾ.ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾದ ಎಚ್.ಬಿ.ದಿನೇಶ್ ಅವರು ಮಾತನಾಡಿ ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮಲ್ಲಿರುವ ಪ್ರತಿಭಾ ಕಲಾ ಪ್ರದರ್ಶನಕ್ಕೆ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಕೆ.ಕುಮಾರ್ ಅವರು ಮಾತನಾಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಂದ ಕಲಿಕೆಯಲ್ಲಿ ಮುಂದೆ ಇದ್ದಾರೆ. ಕಲಿಕೆ ಜೊತೆಗೆ ನೃತ್ಯ, ಭಾಷಣ, ಕಲೆ, ಸಂಗೀತ, ಇತರೆ ಚಟುವಟಿಕೆಗಳಲ್ಲಿ ಮುಂದೆ ಇದ್ದಾರೆ. ಆ ನಿಟ್ಟಿನಲ್ಲಿ ಕಲಿಕಾ ಹಬ್ಬ ಉತ್ತಮ ಅವಕಾಶವಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪೊನ್ನಚ್ಚನ ಶ್ರೀನಿವಾಸ್, ಮೂರ್ನಾಡು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೋಮಶೇಖರ್, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿಮ್ಮಿ ಸೀಕ್ವೇರಾ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ, ಇತರರು ಮಾತನಾಡಿದರು.
ಕುಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗಿರಿಜನ ಹಾಡಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಮೂರ್ನಾಡು ವಾಟೆಕಾಡು ಶಾಲೆಯ ವಿದ್ಯಾರ್ಥಿಗಳು ಬನ್ನಿ ಕೂಡಿ ಹಾಡೋಣ ನೃತ್ಯ ಪ್ರದರ್ಶಿಸಿದರು. ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹುಲಿವೇಷ ನೃತ್ಯ ಪ್ರದರ್ಶನ ಮಾಡಿದರು. ಕೃಷ್ಣ ಮತ್ತು ಪಾರ್ಥ ಪೌರಾಣಿಕ ನಾಟಕದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಚಪ್ಪರ, ಗದ್ದೆ ಉಳುವ ರೈತ, ಹಂಪಿ, ಕಲ್ಲಿನ ರಥ ಮತ್ತಿತರ ವಸ್ತುಪ್ರದರ್ಶನ ಗಮನ ಸೆಳೆಯಿತು. ಮೂರ್ನಾಡು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಕಂಸಾಳೆ, ನೃತ್ಯ ಪ್ರದರ್ಶನ ನೋಡುಗರನ್ನು ಆಕರ್ಷಿಸಿತು. ಎನ್‍ಸಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಭಾರತೀಯ ಸೇವಾ ದಳ ತಂಡಗಳು ಪಾಲ್ಗೊಂಡಿದ್ದರು. ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು. ಸ್ತಬ್ಧ ಚಿತ್ರದ ಮೂಲಕ ಮೆರವಣಿಗೆ ನಡೆಯಿತು.
ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಪಿ.ಗುರುರಾಜ್, ಶಿಕ್ಷಣಾಧಿಕಾರಿ ದೊಡ್ಡೇಗೌಡ, ವಿಷಯ ಪರಿವೀಕ್ಷಕರಾದ ಬಿಂದು, ಮೂರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಲಲಿತ, ಚಿತ್ರಕಲೆ ಶಿಕ್ಷಕರಾದ ಉ.ರಾ.ನಾಗೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ಇತರರು ಇದ್ದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದರು. ಹಬ್ಬ ಹಬ್ಬ ಹಬ್ಬ ಸಂತಸದ ಕಲಿಕೆಯ ಹಬ್ಬ, ಭಾವದ ಬೆಳಕಿಗೆ, ಕಲ್ಪನೆಯ ಕನಸಿಗೆ ರೆಕ್ಕೆಯ ಕಟ್ಟುವ ಹಬ್ಬ… ಹಾಡು ಜನಮನ ಸೆಳೆಯಿತು.





















