ಮಡಿಕೇರಿ ಫೆ.14 : ಕೊಡಗಿನ ವಿಶಿಷ್ಟ ಭೂ ಹಿಡುವಳಿ ‘ಜಮ್ಮಾ’ ಖಾಸಗಿ ಆಸ್ತಿಯಾಗಿದ್ದು, ಈ ವಿಷಯದ ಗೊಂದಲಗಳು ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನೊಂದಿಗೆ ಈಗಾಗಲೆ ಇತ್ಯರ್ಥವಾಗಿದೆ. ಹೀಗಿದ್ದೂ ಜಮ್ಮಾ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತ ಮತ್ತು ಜನರನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡುವ ದುರುದ್ದೇಶವಾಗಿದೆ ಎಂದು ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಆರೋಪಿಸಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಸಚಿವರ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಮತ್ತು ಜಿಲ್ಲೆಯ ಜನರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ಕಂದಾಯ ಸಚಿವರು ಹೇಳಿಕೆ ನೀಡಿ, ಜಿಲ್ಲೆಯ ಜಮ್ಮಾಜಾಗ ಹೊಂದಿರುವ ಹಿಡುವಳಿದಾರರನ್ನು ಗೊಂದಲ ಮತ್ತು ಆತಂಕಕ್ಕೆ ತಳ್ಳಿದ್ದಾರೆ. ಜಿಲ್ಲೆಯ ಜನರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಚುನಾವಣಾ ಹಂತದಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆದಿದೆ ಎಂದು ಟೀಕಿಸಿದರು.
‘ಜಮ್ಮಾ’ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ‘ಚಕ್ಕೇರ ಪೂವಯ್ಯ ಮತ್ತು ಕರ್ನಾಟಕ ರಾಜ್ಯ ಸರ್ಕಾರ’ದ ನಡುವಣ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 1992 ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಜಮ್ಮಾ ಹಿಡುವಳಿದಾರರ ಪರವಾದ ತೀರ್ಪನ್ನು ನೀಡುವ ಮೂಲಕ, ಜಮ್ಮಾ ಸಮಸ್ಯೆ ಇಲ್ಲವಾಗಿದೆಯೆಂದು ತಿಳಿಸಿದರು.
‘ಜಮ್ಮಾ’ ಜಾಗದಲ್ಲಿ ಹಿಡುವಳಿದಾರ ಕೃಷಿ ಮಾಡುವ ಮೂಲಕ ಕಂದಾಯಕ್ಕೆ ಒಳಪಡಿಸಿದಲ್ಲಿ, ಆ ಜಾಗದ ಹಕ್ಕನ್ನು ಪಡೆದುಕೊಳ್ಳುವುದಾಗಿ ಕಾನೂನು ಹೇಳಿದೆ. ಈ ತೀರ್ಪಿನ ಬಳಿಕ ಜಮ್ಮಾ ಜಾಗ ಖಾಸಗಿ ಆಸ್ತಿ ಎನ್ನುವುದು ಶಾಸನ ಸಭೆಯಲ್ಲಿ ಶಾಸನವಾಗಿ ರೂಪುಗೊಂಡಿದೆ ಎಂದು ಸ್ಪಷ್ಟಪಡಿಸಿದರು.
ನ್ಯಾಯಾಲಯದ ತೀರ್ಪಿನ ಬಳಿಕವೂ ಕಂದಾಯ ಸಚಿವರು ‘ಜಮ್ಮಾ’ ಜಾಗವನ್ನು ಕುಮ್ಕಿ ಮತ್ತು ದಕ್ಷಿಣ ಕನ್ನಡದ ವಿವಿಧ ಭೂ ಹಿಡುವಳಿಗಳಿಗೆ ಹೋಲಿಕೆ ಮಾಡಿದ್ದಾರೆ. ಇದೊಂದು ಸ್ಪಷ್ಟ ರಾಜಕೀಯ ದುರುದ್ದೇಶದ ಹೇಳಿಕೆಯಾಗಿದೆ ಎಂದು ಪೊನ್ನಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾನೂನು ಘಟಕದ ಜಿಲ್ಲಾಧ್ಯಕ್ಷ ಶ್ರೀಧರ್ ನಾಯರ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಪ್ರಮುಖರಾದ ಕಿರಣ್ ಪೂವಯ್ಯ, ಬಲ್ಯಾಟಂಡ ಕೌಶಿಕ್ ಹಾಗೂ ಶರೀನ್ ಗಿರೀಶ್ ಉಪಸ್ಥಿತರಿದ್ದರು.









