ಮಡಿಕೇರಿ ಆ.22 : ಇಟಲಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ವೇಗದ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಎಂ.ಕಲ್ಪನಾ ಕುಟ್ಟಪ್ಪ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇಟಲಿಯಲ್ಲಿ ಆ.27ರಿಂದ ಆರಂಭಗೊಳ್ಳಲಿರುವ ಸ್ಪರ್ಧೆಗೆ ರಾಜ್ಯದಿಂದ ಇಬ್ಬರು ಸ್ಕೇಟಿಂಗ್ ಪಟುಗಳು ಪ್ರತಿನಿಧಿಸುತ್ತಿದ್ದು, ಕೊಡಗು ಜಿಲ್ಲೆಯ ಕುಶಾಲನಗರದ ಕಲ್ಪನಾ ಕುಟ್ಟಪ್ಪ ಮತ್ತು ಬೆಂಗಳೂರಿನ ಸುವರ್ಣಿಕ ರಾಧಾಕೃಷ್ಣನ್ ಪಾಲ್ಗೊಳ್ಳಲಿದ್ದಾರೆ.
ಕಲ್ಪನಾ ಕುಟ್ಟಪ್ಪ ಪ್ರಸಕ್ತ ಮೈಸೂರಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ್ದು, ಬೆಂಗಳೂರಿನಲ್ಲಿ ಈ ಹಿಂದೆ ನಡೆದ ರಾಷ್ಟ್ರೀಯ ಮಟ್ಟ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ, ಒಂದು ಬೆಳ್ಳಿ ಪದಕ ಪಡೆದಿದ್ದಾರೆ. ಇದುವರೆಗೆ ರಾಜ್ಯ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ 50ಕ್ಕೂ ಅಧಿಕ ಚಿನ್ನದ ಪದಕ ಪಡೆದಿದ್ದಾಳೆ.
ಮುಂದಿನ ಅಕ್ಟೋಬರ್ 20 ರಿಂದ 10 ದಿನಗಳ ಕಾಲ ಚೈನಾದಲ್ಲಿ ನಡೆಯಲಿರುವ ಏಶಿಯನ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೂಡ ಪಾಲ್ಗೊಳ್ಳಲು ಕಲ್ಪನಾ ಕುಟ್ಟಪ್ಪ ಆಯ್ಕೆಯಾಗಿದ್ದಾರೆ.
ಕಲ್ಪನಾ ಏಕಲವ್ಯ ಪ್ರಶಸ್ತಿ ವಿಜೇತ ಸ್ಕೇಟಿಂಗ್ ಪಟು ಪ್ರತೀಕ್ ರಾಜ ಅವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ತರಬೇತಿ ಪಡೆಯುತ್ತಿದ್ದು, ಮುಕ್ಕಾಟಿರ ರವಿ ಮತ್ತು ಸ್ವಾತಿ ದಂಪತಿಗಳ ಪುತ್ರಿ.