ಮಡಿಕೇರಿ NEWS DESK ಆ.6 : ಕೊಡಗು ಜಿಲ್ಲೆಯಲ್ಲಿ ಕೆಲಸದಲ್ಲಿ ತೊಡಗಿರುವ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸಿ ಶಿಕ್ಷಣ ಮುಂದುವರಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಆಗಸ್ಟ್ 31 ರವರೆಗೆ ರಕ್ಷಣಾ ಕಾರ್ಯಚರಣೆಯನ್ನು ನಡೆಸಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶನ ನೀಡಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಮಕ್ಕಳ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಈ ಸಂದರ್ಭದಲ್ಲಿ ಕೆಲಸದಲ್ಲಿ ತೊಡಗಿರುವ ಬಾಲ ಹಾಗೂ ಕಿಶೋರ ಕಾರ್ಮಿಕರು ಕಂಡುಬಂದಲ್ಲಿ, ಅವರನ್ನು ರಕ್ಷಿಸಿ, ಪುನರ್ವಸತಿಗೊಳಿಸಿ, ಶಿಕ್ಷಣ ಮುಂದುವರಿಕೆಗೆ ಅವಕಾಶ ಮಾಡಿಕೊಡುವುದು ಹಾಗೂ ಕೆಲಸಕ್ಕೆ ನಿಯೋಜಿಸಿಕೊಂಡ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಈ ಕಾರ್ಯಾಚರಣೆಯ ಉದ್ದೇಶವಾಗಿರುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕಾವೇರಿ ಅವರು ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಆಗಸ್ಟ್ 31 ರ ವರೆಗೆ ಮಕ್ಕಳ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಪಾಸಣೆ ಮತ್ತು ಹಠಾತ್ ದಾಳಿ ನಡೆಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಮಡಿಕೇರಿ ನಗರದ ಹಳೇ ಖಾಸಗಿ ಬಸ್ಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ. ಬಸ್ಸು ನಿಲ್ದಾಣ, ಹೊಸ ಖಾಸಗಿ ಬಸ್ಸು ನಿಲ್ದಾಣ, ಟಾಟಾ ಮೋಟಾರ್ಸ್ ಹಾಗೂ ಇತರೆ ಸಂಸ್ಥೆಗಳಿಗೆ ಸತ್ಯ ಎಸ್‌ಜೆ, ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೀಬಲ್, ಹರ್ಷಿತ ಬಿ.ಆರ್, ಮಕ್ಕಳ ಸಹಾಯವಾಣಿ-1098 ಮೇಲ್ವಿಚಾರಕರು, ಅಬ್ದುಲ್ ನಿಸಾರ್ ಪಿ.ಆರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಒ.ಆರ್.ಡಬ್ಲ್ಯೂ, ಮಲ್ಲಿಕಾರ್ಜುನ ಸಿ.ಆರ್, ಕೆ.ಎಸ್.ಆರ್.ಟಿ.ಸಿಯ ಟಿ.ಸಿ, ಪಿ.ಬಿ.ಸುರೇಶ, ನಗರಸಭೆಯ ಆರೋಗ್ಯ ನಿರೀಕ್ಷಕರು, ಎಂ.ಪಿ ಉತ್ತಪ್ಪ, ಎಎಸ್‌ಐ, ಸಿ.ವಿ.ಶ್ರೀಧರ, ಪಿಎಸ್‌ಐ ಮಹೇಶ ಯು.ಎ., ಎಎಸ್‌ಸಿಡಬ್ಲುö್ಯಪಿಒ ಎಸ್.ಜೆ.ಪಿ.ಯು, ಕಾರ್ಮಿಕ ಅಧಿಕಾರಿ ಕಾವೇರಿ ಟಿ., ಆರ್.ಶಿರಾಜ್ ಅಹ್ಮದ್, ಯೋಜನಾ ನಿರ್ದೇಶಕರು, ಜಿ.ಬಾ.ಕಾ.ಯೋ.ಸೊ, ಜರೀನಾ, ಡಿ.ಇ.ಒ ಹಾಗೂ ಎಂ.ಎಂ.ಯತ್ನಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕರು, ಮಡಿಕೇರಿ ವೃತ್ತ, ಮಡಿಕೇರಿರವರ ಜಂಟಿ ತಂಡದೊಂದಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಯಿತು ಹಾಗೂ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಜಾಗೃತಿ ಮೂಡಿಸಲಾಯಿತು. ಈ ತಪಾಸಣೆಯಲ್ಲಿ ಯಾವುದೇ ಬಾಲಕಾರ್ಮಿಕ ಮಕ್ಕಳು ಕಂಡು ಬಂದಿರುವುದಿಲ್ಲ.