ಮಡಿಕೇರಿ ಆ.19 NEWS DESK : ಕಾಯಕ ಯೋಗಿ ನುಲಿಯ ಚಂದಯ್ಯ ಅವರು ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾಗಿದ್ದು, ನುಲಿಯ ಚಂದಯ್ಯ ಅವರ ಜೀವನ ಚರಿತ್ರೆ ಬಗ್ಗೆ ತಿಳಿದುಕೊಳ್ಳುವಂತಾಗಲು ಚಿಕ್ಕ ಅಳುವಾರದ ವಿಶ್ವವಿದ್ಯಾನಿಲಯದಲ್ಲಿ ನುಲಿಯ ಚಂದಯ್ಯ ಅವರ ಅಧ್ಯಯನ ಪೀಠ ಆರಂಭವಾಗಬೇಕು ಎಂದು ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕುಮಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನುಲಿಯ ಚಂದಯ್ಯ ಅವರು ಕಾಯಕ ಯೋಗಿಯಾಗಿದ್ದು, ಬಿಜಾಪುರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರ ಜೊತೆ ಕೈಜೋಡಿಸಿ ಹಲವು ಕ್ರಾಂತಿಗಳಿಗೆ ಕಾರಣರಾದರು ಎಂದರು. ಪ್ರತಿಯೊಬ್ಬರೂ ವೃತ್ತಿಯನ್ನು ಗೌರವಿಸಿ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂಬುದನ್ನು ನುಲಿಯ ಚಂದಯ್ಯ ಅವರು ಸಾರಿದ್ದಾರೆ ಎಂದು ಶ್ರೀ ಕುಮಾರ ಅವರು ಹೇಳಿದರು. ಸಕಲ ಜೀವಿಗಳಲ್ಲಿ ಲೇಸನ್ನು ಬಯಸುವುದೇ ಕುಳುವ ಸಮಾಜದ ಧ್ಯೇಯವಾಗಿದೆ. ಆ ನಿಟ್ಟಿನಲ್ಲಿ ಕಂದಿಸಿ, ಕುಂದಿಸಿ, ಬಂಧಿಸದೆ ಸ್ವಾತಂತ್ರ್ಯಯುತವಾಗಿ ಬದುಕು ನಡೆಸಬೇಕು. ವೃತ್ತಿ ಧರ್ಮವನ್ನು ಗೌರವಿಸಬೇಕು ಎಂದು ನುಲಿಯ ಚಂದಯ್ಯ ಪ್ರತಿಪಾದಿಸಿದ್ದಾರೆ ಎಂದರು. ಹಗ್ಗ ನೇಯುವುದು ಕುಳುವ ಸಮಾಜದ ಕುಲ ಕಸುಬಾಗಿದ್ದು, ಆ ನಿಟ್ಟಿನಲ್ಲಿ ಎಲ್ಲಾ ವೃತ್ತಿಗಳನ್ನು ಗೌರವಿಸಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂಬುದನ್ನು ನುಲಿಯ ಚಂದಯ್ಯ ಅವರು ಸಾರಿದ್ದಾರೆ ಎಂದು ಹೇಳಿದರು. ನುಲಿಯ ಚಂದಯ್ಯ ಅವರು ಶಿವಯೋಗಿಯಾಗಿ, ಕಾಯಕ ಯೋಗಿಯಾಗಿ, ಹಠಯೋಗಿ ಎಂಬ ಬಿರುದನ್ನು ಪಡೆದಿದ್ದರು ಎಂದು ಕುಮಾರ ವಿವರಿಸಿದರು. ಮನಸ್ಸು, ಆತ್ಮ ಮತ್ತು ದೇಹ ಒಂದಕ್ಕೊಂದು ಹಿಡಿತವಿದ್ದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸುಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ನುಲಿಯ ಚಂದಯ್ಯ ಅವರು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದಾರೆ. ಕಾಯಕವೇ ದೇವರು ಎಂಬುದನ್ನು ಪಾಲಿಸಿದ್ದಾರೆ ಎಂದರು. ಕಾಯಕದ ಮೂಲಕ ದೇವರನ್ನು ಕಾಣಬೇಕು. ಸಮಾಜದಲ್ಲಿ ಬದಲಾವಣೆ ಮತ್ತು ಸುಧಾರಣೆ ಆಗಬೇಕು. ಯಾರನ್ನೂ ಕುಂದಿಸದೆ, ಬಂಧಿಸದೆ ಎಲ್ಲರೂ ಸಮಾನರು ಎಂಬುದನ್ನು ಸಾರುವುದೇ ನುಲಿಯ ಚಂದಯ್ಯ ಅವರ ಆದರ್ಶಗಳಾಗಿದ್ದವು ಎಂದು ಅವರು ವಿವರಿಸಿದರು. ಕುಳುವ ಸಮಾಜದ ಜಿಲ್ಲಾಧ್ಯಕ್ಷರಾದ ಎಚ್.ಪಿ.ಮಹೇಶ್ ಮಾತನಾಡಿ, ಕುಳುವ ಸಮಾಜ ಸರ್ಕಾರದ ಸೌಲಭ್ಯಗಳನ್ನು ಪಡೆದು ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದರು. ಕುಳುವ ಸಮಾಜದ ವಿದ್ಯಾರ್ಥಿಗಳು ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು. ನುಲಿಯ ಚಂದಯ್ಯ ಅವರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ನಾಡಿನಾದ್ಯಂತ ದೊರೆಯಬೇಕು. ಆ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಕನ್ನಿಕಾ ಅವರು ಮಾತನಾಡಿ ನುಲಿಯ ಚಂದಯ್ಯ ಅವರು ಬಸವಣ್ಣನವರ ಸಮಕಾಲೀನರಾಗಿದ್ದು, ನುಲಿಯ ಚಂದಯ್ಯ ಅವರ ಬಗ್ಗೆ ಸಂಶೋಧನೆ ನಡೆಯಬೇಕು. ಪಠ್ಯಕ್ಕೆ ಸೇರ್ಪಡೆ ಮಾಡಬೇಕು ಎಂದು ವಿವರಿಸಿದರು. ಜಿಲ್ಲಾ ಕುಳುವ ಸಮಾಜದ ಕಾರ್ಯದರ್ಶಿ ಜವರಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ನಗರಸಭೆಯ ಆರೋಗ್ಯ ನಿರೀಕ್ಷಕರಾದ ಸುರೇಶ್. ಸಹಾಯಕ ಪ್ರಾಧ್ಯಾಪಕರಾದ ನಮಿತ, ನಿರ್ಮಲ ಇತರರು ಇದ್ದರು. ಕುಮಾರ ಸ್ವಾಗತಿಸಿದರು. ಕೀರ್ತನ ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.
Breaking News
- *ಕರಿಕೆಯಲ್ಲಿ ನಿರಂತರ ಚಿರತೆ ದಾಳಿ : ಅರಣ್ಯಾಧಿಕಾರಿಗಳಿಗೆ ದೂರು ನೀಡಿದ ಗ್ರಾ.ಪಂ*
- *ಮಕ್ಕಂದೂರಿನಲ್ಲಿ ಸಂಘಟನಾ ಪರ್ವ ಆರಂಭಿಸಿದ ಸಂಸದ ಯದುವೀರ್*
- *ಬಕ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ*
- *ಚೆಟ್ಟಳ್ಳಿಯಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ : ಸಹಕಾರ ಸಂಘಗಳು ಆರ್ಥಿಕ ಶಕ್ತಿ ಕೇಂದ್ರಗಳಾಗಬೇಕು : ಎ.ಕೆ.ಮನು ಮುತ್ತಪ್ಪ*
- *ದುಬಾರೆ ಸಾಕಾನೆ ಶಿಬಿರಕ್ಕೆ ಸಂಸದರ ಭೇಟಿ : ಸಮಸ್ಯೆಗಳನ್ನು ಆಲಿಸಿದ ಯದುವೀರ್*
- *ಸುಂಟಿಕೊಪ್ಪದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ*
- *ಮಾದಾಪುರ : ಸಿಹಿ ಹಂಚಿ ಸಂಭ್ರಮಿಸಿದ ವಿದ್ಯಾರ್ಥಿಗಳು*
- *ಸುಂಟಿಕೊಪ್ಪದಲ್ಲಿ ಮಕ್ಕಳ ದಿನಾಚರಣೆ : ಉತ್ತಮವಾದ ನಾಳೆಗಳನ್ನು ಸೃಷ್ಟಿಸುವ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿದೆ : ಕೆ.ತಿಮ್ಮಪ್ಪ ಅಭಿಪ್ರಾಯ*
- *ಯುವನಿಧಿ ಯೋಜನೆ ಹೆಸರು ನೋಂದಣಿಗೆ ಮನವಿ*
- *ಮಡಿಕೇರಿಯಲ್ಲಿ ಸಹಕಾರ ಸಪ್ತಾಹ : ಸಹಕಾರ ಸಂಘಗಳ ಬಲವರ್ಧನೆಗೆ ಮತ್ತಷ್ಟು ಶ್ರಮಿಸಿ : ಎಂ.ಸಿ.ನಾಣಯ್ಯ ಸಲಹೆ*