ನಾಪೋಕ್ಲು ಸೆ.9 NEWS DESK : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಯತ್, ಎಸ್.ಜೆ.ಎಮ್, ಎಸ್.ವೈ.ಎಸ್, ಎಸ್.ಎಸ್.ಎಫ್ ಸಂಯುಕ್ತ ಆಶ್ರಯದಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ ನಾಪೋಕ್ಲು ಪಟ್ಟಣದಲ್ಲಿ ನಡೆಯಿತು. ಪಟ್ಟಣದಸಂತೆ ಮೈದಾನದಲ್ಲಿ ಆಯೋಜಿಸಿದ ಸಭೆಯಲ್ಲಿ ಕೊಡಗು ಜಿಲ್ಲಾ ಎಸ್.ವೈ.ಎಸ್ ಮಾಧ್ಯಮ ಕಾರ್ಯದರ್ಶಿ ಶಾಫಿ ಸಹದಿ ಭಾಗ ವಹಿಸಿ ಮಾತನಾಡಿ, ನಾವು ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಪ್ರವಾದಿಯನ್ನು. ನಾವು ಎಲ್ಲಾ ಧರ್ಮದವರೊಂದಿಗೆ ಸೌಹಾರ್ದತೆಯಿಂದ ಬಾಳಬೇಕು ಎಂಬುದನ್ನು ಅವರು ಪ್ರತಿಪಾದಿಸಿದ್ದಾರೆ. ಆದುದರಿಂದ ಪರಸ್ಪರ ಸೌಹಾರ್ದತೆ ಅಗತ್ಯ, ಮಹಮದ್ ಪೈಗಂಬರರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಸ್ಲಾಂ ಬಗ್ಗೆ ತಪ್ಪು ಸಂದೇಶಗಳನ್ನು ರವಾನಿಸುತ್ತಿರುವುದು ಸರಿಯಲ್ಲ ಎಂದರು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಅಫಿಲ್ ಸಹದಿ ಕೊಳಕೇರಿ, ಕರ್ನಾಟಕ ಮುಸ್ಲಿಂ ಜಮಾಯತ್ತಿನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಕೊಡಗು ಜಿಲ್ಲಾ ಸಂಯುಕ್ತ ಜಮಾಯತ್ ಅಧ್ಯಕ್ಷ ಉಸೈನ್ ಸಖಾಫಿ ಎಮ್ಮೆಮಾಡು, ನಾಪೋಕ್ಲು ಮಸೀದಿಯ ಖತೀಬರದ ಅಬ್ದುಲ್ ಸಖಾಫಿ, ನಾಪೋಕ್ಲು ಜಮಾಯತ್ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರಹಿಮಾನ್, ಕೊಟ್ಟಮುಡಿ ಜಮಾಯತ್ ಅಧ್ಯಕ್ಷ ಎ.ಎಂ.ಹಂಸ ಹಾಜರಿದ್ದರು. ಜಾಥಾದಲ್ಲಿ ಜಮಾತ್, ಮದರಸಗಳ ಮತ್ತು ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಜನಾಂಗ ಬಾಂಧವರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.