ನಾಪೋಕ್ಲು ಸೆ.9 NEWS DESK : ನಾಪೋಕ್ಲುವಿನ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಗೌರಿ-ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಾಲ್ಕು ಗಣೇಶ ಸೇವಾ ಸಮಿತಿಗಳ ವತಿಯಿಂದ ಗೌರಿ ಗಣೇಶ ಮೂರ್ತಿಗಳನ್ನು ಅಲಂಕೃತ ವಾಹನಗಳಲ್ಲಿಸಿ ವಾದ್ಯದೊಂದಿಗೆ ಸಂತೆ ಮೈದಾನದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿಸಿ ವಿವಿಧ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಗಣೇಶೋತ್ಸವ ಸಮಿತಿಯ ಪ್ರಮುಖ ಕಲಿಯಂಡ ವಿಠಲ ಇಡುಗಾಯಿ ಹೊಡೆಯುವುದರ ಮೂಲಕ ಸಂತೆ ಮೈದಾನದಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ದೇಶ ಹಾಗೂ ಧರ್ಮಕ್ಕೆ ಯಾವುದೇ ಧಕ್ಕೆ ಬಾರದಂತೆ ದೇಶದ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ನಿಸ್ವಾರ್ಥ ಸೇವೆಯಿಂದ ಶ್ರಮಿಸುವಂತಾಗಬೇಕು. ಪಟ್ಟಣದಲ್ಲಿ 50 ವರ್ಷಗಳಿಂದ ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈ ವರ್ಷವೂ ಐದು ವಿವಿಧ ಭಾಗಗಳಲ್ಲಿ ಗೌರಿ ಗಣೇಶ ಸಮಿತಿಗಳಿಂದ ಮೂರ್ತಿಗಳನ್ನು ಪ್ರತಿಷ್ಠಾಪನೆಗೊಳಿಸಲಾಗಿದೆ. ಎಲ್ಲಾ ಗಣೇಶೋತ್ಸವ ಸಮಿತಿಗಳಿಂದ ಪ್ರತಿಷ್ಠಾಪನೆಗೊಂಡ ಗೌರಿ ಗಣೇಶ ಮೂರ್ತಿಗಳನ್ನು ಅಲಂಕೃತ ಮಂಟಪದಲ್ಲಿ ಇರಿಸಿ ವಿವಿಧ ಆಕರ್ಷಕ ಕಲಾ ತಂಡಗಳೊಂದಿಗೆ ಮೆರವಣಿಗೆ ತೆರಳಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದರು. ಇಂದಿರಾ ನಗರದ ವಿವೇಕಾನಂದ ಸಂಘದ ಗಣೇಶ ಉತ್ಸವ ಸೇವಾ ಸಮಿತಿ ವತಿಯಿಂದ 19ನೇ ವರ್ಷ ಆಚರ್ಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಗಳನ್ನು ಇಂದಿರಾನಗರದಲ್ಲಿ , ಶ್ರೀರಾಮ ಟ್ರಸ್ಟ್ ಗಣೇಶೋತ್ಸವ ಸಮಿತಿ ವತಿಯಿಂದ ವತಿಯಿಂದ 45ನೇ ವರ್ಷ ಆಚರ್ಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಗಳನ್ನು ಶ್ರೀ ಗುರುಪೊನ್ನಪ್ಪ ಸಭಾಂಗಣದಲ್ಲಿ, ಶ್ರೀ ಪೊನ್ನು ಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ 15ನೇ ವರ್ಷದ ಆಚರ್ಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಗಳನ್ನು ಹಳೆ ತಾಲೂಕು ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ, ನಾಪೋಕ್ಲು ನಾಡು ಗೌರಿ ಗಣೇಶ ಸಮಿತಿ ವತಿಯಿಂದ ಹಳೆ ತಾಲೂಕಿನ ಶ್ರೀ ಭಗವತಿ ದೇವಾಲಯದಲ್ಲಿ 31ನೇ ವರ್ಷ ಆಚರ್ಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಕಕ್ಕುಂದ ಕಾಡಿನ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ವೆಂಕಟೇಶ್ವರ ದೇವಾಲಯದಲ್ಲಿ 19ನೇ ವರ್ಷ ಆಚರ್ಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಎಲ್ಲಾ ಸಮಿತಿಗಳ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಭಕ್ತಾಧಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನದಾನ ನೆರವೇರಿತು. ಈ ಸಂದರ್ಭ ಎಲ್ಲಾ ಗೌರಿ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿದಿನ ವಿವಿಧ ಸೇವಾ ಸಮಿತಿಗಳ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿದ್ದು ಸೆ.11 ರಂದು ಸಾಮೂಹಿಕವಾಗಿ ಮೆರವಣಿಗೆಯಲ್ಲಿ ಉತ್ಸವಮೂರ್ತಿಗಳನ್ನು ಅಲಂಕೃತವಾಹನಗಳಲ್ಲಿ ಇರಿಸಿ ಸಾಂಸ್ಕೃತಿಕ ಕಲಾ ತಂಡಗಳ ಜೊತೆ ,ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಪವಿತ್ರ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು.
ವರದಿ : ದುಗ್ಗಳ ಸದಾನಂದ.