ಮಡಿಕೇರಿ ಸೆ.9 NEWS DESK : ಸ್ಥಳೀಯ ಕೊಡವತಿಯರು ನಡೆಸುವ ಪರಿಸರ ಸ್ನೇಹಿ, ಜನಪದ ಸ್ನೇಹಿ ಹೋಂಸ್ಟೇ ಗಳನ್ನು ಧಮನಿಸಲು ಮತ್ತು ಕೊಡವ ರೈತರನ್ನು ಹಣಿಯಲು ಸಂಚು ರೂಪಿಸಲಾಗುತ್ತಿದೆ. ಹೊರಗಿನ ಬಂಡವಾಳಶಾಹಿಗಳ ಪ್ರಕೃತಿ ವಿನಾಶಕ ರೆಸಾರ್ಟ್‍ಗಳಿಗೆ, ದೊಡ್ಡ ದೊಡ್ಡ ಕಂಪೆನಿಗಳ ಯೋಜನೆಗಳಿಗೆ ಅನುಮತಿ ನೀಡುವ ಮೂಲಕ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‍ಸಿ ವತಿಯಿಂದ ನಾಪೋಕ್ಲುವಿನಲ್ಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಹಾಗೂ ಕಪ್ಪುಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ ನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ. ಈ ಎಲ್ಲಾ ಮಾಫಿಯಾಗಳಿಗೆ ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷವಿದೆ. ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಆರೋಪಿಸಿದರು. ಹಸಿರ ಪರಿಸರ, ಜಲಪ್ರದೇಶಗಳ ಸಂರಕ್ಷಣೆಗಾಗಿ ಸರ್ಕಾರ ಸೂಕ್ಷ್ಮ ಪರಿಸರ ವಲಯ ಮತ್ತು ವಿಶ್ವ ಪಾರಂಪರಿಕ ತಾಣ ಕಾನೂನನ್ನು ಜಾರಿಗೆ ತಂದಿದೆ. ಆದರೆ ಕೊಡಗಿನಲ್ಲಿ ಈ ಕಾನೂನು ಬಂಡವಾಳಶಾಹಿಗಳಿಗೆ ಅನ್ವಯವಾಗುತ್ತಿಲ್ಲ, ಬದಲಿಗೆ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮೇಲೆ ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕೆ ಬಳಸುವ ಭಯಾನಕ ಸ್ಫೋಟಕಗಳಿಂದ ಕುಶಾಲನಗರ ಹೋಬಳಿಯಲ್ಲಿ ಕಳೆದ ಒಂದು ತಿಂಗಳಿನಿಂದ ಭೂಮಿ ಕಂಪಿಸುತ್ತಿದೆ. ಇದೇ ಭಾಗದಲ್ಲಿ ನೂರಾರು ಎಕರೆ ಭೂಪರಿವರ್ತನೆಗೆ ಸಿದ್ಧತೆ ನಡೆದಿದೆ. ರೆಸಾರ್ಟ್ ಮಾಫಿಯಾಗಳು ಹೋರಾಟವನ್ನು ಹತ್ತಿಕ್ಕಲು ಪಂಚಾಯ್ತಿ ಪ್ರತಿನಿಧಿಗಳನ್ನು ಹಾಗೂ ಪ್ರಜಾಪ್ರಭುತ್ವದ 4ನೇ ಅಂಗದ ಕೆಲವು ಸದಸ್ಯರನ್ನು ಸ್ಲೀಫಿಂಗ್ ಪಾಟ್ರ್ನರ್ ಗಳನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ನೋಂದಣಿ ಕಚೇರಿಯಲ್ಲಿ ಆಕರ್ಷಕ ಮೊತ್ತದ ಹಣ ನೇರ ಮತ್ತು ಪರೋಕ್ಷವಾಗಿ ಚಲಾವಣೆಯಾಗುತ್ತಿದ್ದು, ಬೃಹತ್ ಭೂವಿಲೇವಾರಿ ಸುಲಭವಾಗುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯ ಕುಟ್ಟ ಸಮೀಪದ ಪೂಜೆಕಲ್ಲು ಗ್ರಾಮದಲ್ಲಿ ಜಲಗರ್ಭ ಮತ್ತು ಭೂಗರ್ಭ ಸ್ಫೋಟವಾಗಿದೆ. ಇಲ್ಲಿ ಸಂಭವಿಸಿರುವ ಅನಾಹುತ ಲಕ್ಷ್ಮಣ ತೀರ್ಥ ವ್ಯಾಪ್ತಿಗೂ ವ್ಯಾಪಿಸಿ ಕ್ರಮೇಣ ಇಡೀ ಕೊಡಗಿಗೆ ಅನಾಹುತ ಎದುರಾಗಬಹುದು. ಸರಕಾರದ ಕಾನೂನು ಕೊಡವರಿಗೆ ಮಾತ್ರ ಅನ್ವಯವಾಗುತ್ತಿದ್ದು, ಬಂಡವಾಳಶಾಹಿಗಳು ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷದಿಂದ ಯಾವುದೇ ಸೂಕ್ಷ್ಮ ಪರಿಸರ ವಲಯದ ಕಾನೂನಿಗೆ ಒಳಪಡುತ್ತಿಲ್ಲ. ಕೊಡವರು ಮಾತ್ರ ಎಲ್ಲಾ ಕಾನೂನುಗಳಿಗೆ ಒಳಪಟ್ಟು ಆಡಳಿತ ವ್ಯವಸ್ಥೆಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಕೊಡವರು ಹೋರಾಟದ ಮೂಲಕ ವೇದನೆಯನ್ನು ಬಿಚ್ಚಿಟ್ಟರೂ ಯಾವುದೇ ಸ್ಪಂದನೆ ಮತ್ತು ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದರು. ಹಾರಂಗಿ ಸೇರಿದಂತೆ ಅಪಾಯಕಾರಿ ಕಟ್ಟೆಗಳನ್ನು ತೆರವುಗೊಳಿಸಬೇಕು. 60 ವರ್ಷಗಳ ಹಿಂದೆ ಹಾರಂಗಿಕಟ್ಟೆ ಕಟ್ಟುವ ಸಲುವಾಗಿ ಅಲ್ಲಿನ ಇಟ್ಟಿಮಾಡು ಪರ್ವತ ಬಂಡೆಕಲ್ಲುಗಳನ್ನು ಸೀಳಲು ಸಿಡಿಮದ್ದುಗಳನ್ನು ಸ್ಪೋಟಿಸಿದ ಹಿನ್ನೆಲೆಯಲ್ಲಿ ನಿರಂತರವಾಗಿ ಜಲನಾಳ ಮತ್ತು ಭೂಮಿಯ ನರನಾಡಿಗಳು ಕಂಪಿಸಿ ಇಂದು ಅದರ ಅದರುವಿಕೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೊಡಗು ಜಿಲ್ಲೆಯಲ್ಲಿರುವ ಮಾರಕಕಟ್ಟೆಗಳು ಮತ್ತು ರೆಸಾರ್ಟ್‍ಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದರು. ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಎನ್‍ಸಿ ಸಂಘಟನೆ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣ, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್ ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಮಾತ್ರ ಗುಪ್ತವಾಗಿ ಅನುಮತಿ ನೀಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಸರ್ಕಾರವೇ ನೇರವಾಗಿ ಭೂಪರಿವರ್ತನೆಗೆ ಕುಮ್ಮಕ್ಕು ನೀಡುತ್ತಿದೆ. ಕೊಡಗಿನಲ್ಲಿ ನಿರಂತರವಾಗಿ ಹೊರ ಪ್ರದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ವಲಯಕ್ಕೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ, ಅನಿವಾಸಿ ಭಾರತೀಯರಿಗೆ, ರೆಸಾರ್ಟ್ ಮಾಫಿಯಾಗಳಿಗೆ, ದೊಡ್ಡ ಉದ್ಯಮಿಪತಿಗಳಿಗೆ ಭೂಮಿಯನ್ನು ಮಿತಿ ಮೀರಿ ನೀಡಿದರೆ ಭವಿಷ್ಯತ್ತಿಗೆ ತೊಂದರೆಯಾಗಲಿದೆ. ಈ ಹಿಂದೆ 2018 ರಲ್ಲಿ ಸೂರ್ಲಬ್ಬಿ ನಾಡ್, ಮುತ್ತುನಾಡ್, ಪೊರಮಲೆನಾಡ್ ಮತ್ತು ಬದಿಗೇರಿನಾಡ್ ನಲ್ಲಿ ಭೀಕರ ಜಲಕಂಟಕದಿಂದ ಅನಾಹುತ ಸಂಭವಿಸಿತ್ತು, ಅಲ್ಲದೆ ಅನೇಕ ಮನೆಗಳು ನಾಶವಾಗಿದ್ದವು. 15 ವಷಗಳ ಹಿಂದೆ ಗಡಿನಾಡಿನ ಬಿಳಿಗೇರಿ ಭಾಗದಲ್ಲಿ ಸಂಭವಿಸಿದ ಭೂಕಂಪನದಿಂದ ಬಾಚಿನಾಡಂಡ ಅಪ್ಪಾಜಿ ಕುಟುಂಬದ ಮನೆ ಸಂಪೂರ್ಣ ನಾಶವಾಗಿತ್ತು. ಇದೀಗ ಕೇರಳದ ವಯನಾಡಿನ ದುರಂತ ನಮ್ಮ ಮುಂದೆ ಇದ್ದು, ಮತ್ತೊಮ್ಮೆ ಈ ಅನಾಹುತ ಸಂಭವಿಸದಂತೆ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ತರಬೇಕು. ಕೊಡಗು ಪ್ರದೇಶ ಬೆಟ್ಟಗುಡ್ಡ, ನದಿ, ತೊರೆಗಳಿಂದ ಕೂಡಿದ್ದು, ಅತ್ಯಂತ ಸೂಕ್ಷಮತೆಯನ್ನು ಹೊಂದಿದೆ. ಆದ್ದರಿಂದ ಬಯಲುಸೀಮೆಯಂತೆ ಕೊಡಗಿನ ಭೌಗೋಳಿಕ ಸ್ಥಿತಿಗತಿಯನ್ನು ಪರಿಗಣಿಸಬಾರದು ಎಂದು ಎನ್.ಯು.ನಾಚಪ್ಪ ಆಗ್ರಹಿಸಿದರು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
::: ಸೆ.10 ರಂದು ಜನಜಾಗೃತಿ :::
ಸಿಎನ್‍ಸಿ ವತಿಯಿಂದ ಸೆ.10 ರಂದು ಚೇರಂಬಾಣೆ ಹಾಗೂ ಸೆ.16 ರಂದು ಹುದಿಕೇರಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು. ನಾಪೋಕ್ಲುವಿನಲ್ಲಿ ನಡೆದ ಜನಜಾಗೃತಿ ಮನವ ಸರಪಳಿಯಲ್ಲಿ ಕಲಿಯಂಡ ಮೀನಾ, ಅಪ್ಪಚ್ಚಿರ ರೀನಾ, ನೆರವಂಡ ಮೀರಾ, ಪುಲ್ಲೇರ ಪದ್ಮಿನಿ, ಕರವಂಡ ಸರ್ಸು, ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಆಳ್‍ಮಂಡ ಜೈ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಅಪ್ಪಾರಂಡ ಪ್ರಸಾದ್, ಮಣೋಟೀರ ಜಗದೀಶ್, ಮಣೋಟೀರ ಸ್ವರೂಪ್, ಪಟ್ಟಮಾಡ ಅಶೋಕ್, ಕರವಂಡ ಲವ, ಕೇಟೋಳಿರ ಹರೀಶ್, ಅರೆಯಡ ರತ್ನ, ಅಪ್ಪಚೆಟ್ಟೋಳಂಡ ಮನು, ಕುಲ್ಲೇಟೀರ ಬೇಬ ಅರುಣ, ಕರವಂಡ ರವಿ, ಚೇನಂಡ ಗಿರೀಶ್, ಬಾಳೆಯಡ ಶಿವು, ಮಣೋಟೀರ ಪ್ರದೀಪ್, ಮಣೋಟೀರ ಅಪ್ಪಣ್ಣ, ಕೇಲೇಟಿರ ದೀಪು, ಕುಂಡ್ಯೋಳಂಡ ಕಂದ, ಕುಂಡ್ಯೋಳಂಡ ಸುಬ್ಬಯ್ಯ, ಕೈಬಿಲಿರ ಪ್ರಕಾಶ್, ಕೂಪದೀರ ಸಾಬು, ಅರೆಯಡ ಅಶೋಕ್, ನಾಯಕಂಡ ಬೋಪಣ್ಣ, ಕೇಟೋಳಿರ ಡಾಲಿ, ಕೊಂಡಿರ ಗಣೇಶ್, ಪೊರ್ಕೊಂಡ ಅನಿಲ್, ಚೀಯಕಪೂವಂಡ ರಘು, ಮೂವೇರ ವಿನು, ಕೆಟೋಳಿರ ಮಲ್ಲು, ಕೈಬಿಲಿರ ಸಾಬು, ತಿರೋಡಿರ ರಾಜ, ಚೀಯಕಪೂವಂಡ ಅಜಂತಾ, ಅರೆಯಡ ಕಿರಣ್, ಬಾಳೆಯಡ ರೋಶನ್, ಪುಲ್ಲೇರ ಸುನು, ಚೀಯಕಪೂವಂಡ ಸೂರಿ, ಮಣೋಟೀರ ಡಿಕ್ಕ, ಕೇಲೇಟಿರ ಡಿಕ್ಕ, ಬೊಪ್ಪಂಡ ಕವನ್, ಕುಲ್ಲೇಟಿರ ಲೋಕೇಶ್, ಕನ್ನಂಬಿರ ಸುಧಿ, ಕಂಗಂಡ ಜಾಲಿ, ಕರವಂಡ ನಾಣಯ್ಯ, ಅಪ್ಪುಮಣಿಯಂಡ ಬನ್ಸಿ, ಕುಲ್ಲೇಟಿರ ಶಂಕರಿ, ಪಾಲೆಯಡ ಸಂತು, ಶಿವಚಾಳಿಯಂಡ ಅಂಬಿ, ನಾಯಕಂಡ ದೀಪು, ಕುಲ್ಲೇಟಿರ ಅಜಿತ್, ಶಿವಚಾಳಿಯಂಡ ಲವ, ಬಿದ್ದಾಟಂಡ ರೋಜಿ, ಪುಲ್ಲೇರ ಚಿಣ್ಣಪ್ಪ, ಬಾಚಮಂಡ ಬೆಲ್ಲು, ಬಿದ್ದಂಡ ವಿಜು, ಕೇಟೋಳಿರ ಶಮ್ಮಿ, ಕಂಗಾಂಡ ಭೀಮಯ್ಯ, ಕಲಿಯಂಡ ದೀಪು, ಮೇಕಮಣಿಯಂಡ ಶಂಬು, ತೆಕ್ಕಬೊಟ್ಟೋಳಂಡ ಸೂರಿ, ಪುಲ್ಲೇರ ವಿನು ಸೇರಿದಂತೆ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.