ಮಡಿಕೇರಿ ಸೆ.10 NEWS DESK : ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಇದೇ ಸೆಪ್ಟೆಂಬರ್, 15 ರಂದು ಹಮ್ಮಿಕೊಳ್ಳಲಾಗಿದ್ದು, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಎಲ್ಲರೂ ಕೈಜೋಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಬೀದರ್‍ನಿಂದ ಚಾಮರಾಜನಗರದ ವರೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದ್ದು, ಆ ನಿಟ್ಟಿನಲ್ಲಿ ಸ್ಥಳೀಯ ಹಂತದಲ್ಲಿ ಅಗತ್ಯ ಸಹಕಾರಕ್ಕೆ ಕೋರಿದರು. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಸಂಪಾಜೆಯಿಂದ ಶಿರಂಗಾಲದ ಕಡುವಿನ ಹೊಸಹಳ್ಳಿ ಗಡಿಭಾಗದವರೆಗೆ ಮಾನವ ಸರಪಳಿ ನಡೆಸಲು ಉದ್ದೇಶಿಸಲಾಗಿದ್ದು, ಕೊಡಗು ಜಿಲ್ಲೆ ಅರಣ್ಯ ಪ್ರದೇಶ ಹೊಂದಿರುವುದರಿಂದ ಕೆಲವು ವಿನಾಯಿತಿಯನ್ನು ನೀಡಲಾಗಿದೆ ಎಂದು ತಿಳಿಸಿದರು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ರಾಷ್ಟ್ರೀಯ ಹಬ್ಬ ಮಾದರಿಯಲ್ಲಿ ಯಶಸ್ಸುಗೊಳಿಸಬೇಕಿದೆ. ಸದ್ಯ ಆಯಾಯ ಗ್ರಾಮ/ ಗ್ರಾಮ ಪಂಚಾಯತಿಗಳಲ್ಲಿ ಸ್ಥಳೀಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮಾನವ ಸರಪಳಿ ಅಥವಾ ರಿಲೇ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸಿಗೆ ಮನವಿ ಮಾಡಿದರು. ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಯಶಸ್ಸುಗೊಳಿಸಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು, ಎನ್‍ಸಿಸಿ, ಎನ್‍ಎಸ್‍ಎಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಎಲ್ಲರೂ ಕೈಜೋಡಿಸುವಂತೆ ಆರ್.ಐಶ್ವರ್ಯ ಕೋರಿದರು.ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಮಾತನಾಡಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸಂಪಾಜೆಯಿಂದ ಶಿರಂಗಾಲ ಬಳಿಯ ಕಡುವಿನ ಹೊಸಳ್ಳಿವರೆಗೆ ಸುಮಾರು 72 ಕಿ.ಮೀ.ವರೆಗೆ ಮಾನವ ಸರಪಳಿ/ ರಿಲೇ ಮೂಲಕ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಮಳೆ ಇರುವುದರಿಂದ ಪರಿಸ್ಥಿತಿಯನ್ನು ನೋಡಿಕೊಂಡು ಸ್ಥಳೀಯ ಮಟ್ಟದಲ್ಲಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದರು. ರಾಷ್ಟ್ರದ ಪ್ರಜಾಪ್ರಭುತ್ವ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದ್ದರಿಂದ ಕುಟುಂಬ ಸಮೇತ ಸ್ಥಳೀಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ಶೇಖರ್ ಕೋರಿದರು. ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಕೊಡಗು ಜಿಲ್ಲೆಯಲ್ಲಿ 10 ಲಕ್ಷ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಇದೇ ಸಂದರ್ಭದಲ್ಲಿ ತಿಳಿಸಿದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸುವಂತಾಗಬೇಕು. ಜಿಲ್ಲೆಯ ಸಂಜೀವಿನಿ ಒಕ್ಕೂಟದವರು ಹೀಗೆ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು. ಗ್ರಾ.ಪಂ., ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಎಲ್ಲರೂ ಕೈಜೋಡಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ಕೆ.ಟಿ.ಬೇಬಿಮ್ಯಾಥ್ಯೂ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್‍ನ ಪ್ರತಿನಿಧಿಗಳು ಸ್ಥಳೀಯ ಮಟ್ಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ರೇವತಿ ರಮೇಶ್ ಮಾತನಾಡಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ವಿವಿಧ ಸಮಾಜಗಳ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಸೇರಿದಂತೆ ಅವರವರ ಸಾಂಸ್ಕೃತಿಕ ಉಡುಪುನಲ್ಲಿ ಪಾಲ್ಗೊಂಡರೆ ಆಕರ್ಷಣೀಯವಾಗಿರುತ್ತದೆ ಎಂದು ಸಲಹೆ ಮಾಡಿದರು. ಮತ್ತೊಬ್ಬ ಪ್ರಮುಖರಾದ ಮುನೀರ್ ಅಹ್ಮದ್ ಮಾತನಾಡಿ ಲಯನ್ಸ್, ರೋಟರಿ, ಜಾನಪದ ಪರಿಷತ್ತು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳನ್ನು ಆಹ್ವಾನಿಸಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರತಿಯೊಬ್ಬರಲ್ಲಿ ಭ್ರಾತೃತ್ವ ಮೌಲ್ಯವನ್ನು ಎತ್ತಿಹಿಡಿಯುವಂತಾಗಬೇಕು ಎಂದು ಸಲಹೆ ಮಾಡಿದರು. ಪ್ರಮುಖರಾದ ಎಚ್.ಎಲ್.ದಿವಾಕರ ಮಾತನಾಡಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯು ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಸರ್ಕಾರದ ಆಶಯದಂತೆ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಮತ್ತೊಬ್ಬ ಪ್ರಮುಖರಾದ ಯಾಕೂಬ್ ಮಾತನಾಡಿ ದೇವಾಲಯ, ಚರ್ಚ್, ಮಸೀದಿ, ವಕ್ಫ್ ಬೋರ್ಡ್ ಸೇರಿದಂತೆ ಹಲವರನ್ನು ಆಹ್ವಾನಿಸಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವಂತೆ ತಿಳಿಸಿದರು. ಪ್ರಮುಖರಾದ ಅಮೀದ್ ಮಾತನಾಡಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳನ್ನು ಆಹ್ವಾನಿಸುವಂತಾಗಬೇಕು ಎಂದು ಹೇಳಿದರು. ಪ್ರಮುಖರಾದ ವೀರಭದ್ರಯ್ಯ, ಜಗದೀಶ್ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಂಬಂಧ ಹಲವು ಮಾರ್ಗದರ್ಶನ ನೀಡಿದರು. ಜಿಲ್ಲಾ ಶಿಕ್ಷಣಾಧಿಕಾರಿ ಎಂ.ಮಹದೇವಸ್ವಾಮಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಈಗಾಗಲೇ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಪ್ರಮುಖರಾದ ಚಂದ್ರಪ್ರಸಾದ್, ಪ್ರಾಂಶುಪಾಲರಾದ ವಿಜಯ್, ಅಧಿಕಾರಿಗಳಾದ ಹೊನ್ನೇಗೌಡ, ಪ್ರವೀಣ್ ಕುಮಾರ್, ಕವಿತಾ, ಶಿವಶಂಕರ, ಬಾಲಕೃಷ್ಣ ರೈ ಇತರರು ಇದ್ದರು.