ಕುಶಾಲನಗರ NEWS DESK ಸೆ 10 : ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವಸ್ಥಾನದ ಅಭಿವೃದ್ಧಿಗೆ ಸುದೀರ್ಘ 45 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಿತಿ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದ ವಿ.ಎನ್.ವಸಂತಕುಮಾರ್ ಅವರಿಗೆ ದೇವಸ್ಥಾನದ ನೂತನ ಸಮಿತಿಯ ಆಡಳಿತ ಮಂಡಳಿ ವತಿಯಿಂದ ಪೌರ ಸನ್ಮಾನ ಕಾರ್ಯಕ್ರಮ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರ ಮಾರುತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚುರಂಜನ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ದೇವಾಲಯ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. 1980 ರಲ್ಲಿ ಸಮಿತಿ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ವಸಂತಕುಮಾರ್ ಅವರ ಕಾರ್ಯ ಶ್ಲಾಘನೀಯ. ಧಾರ್ಮಿಕ ಕೆಲಸ ಕಾರ್ಯಗಳನ್ನು ನಡೆಸುವುದು ಕೇವಲ ಸಂಪತ್ತಿನಿಂದ ಮಾತ್ರವಲ್ಲದೆ ಶುದ್ದ ಮನಸ್ಥಿತಿ ಮೂಲಕ ಕೆಲಸ ನಿರ್ವಹಿಸಬೇಕಾದ ಜವಾಬ್ದಾರಿ ಇರುತ್ತದೆ. ಅಜಾತಶತ್ರು ಗುಣವುಳ್ಳ ಕಾರಣ ವಸಂತಕುಮಾರ್ ಅವರಿಂದ ಈ ಸುದೀರ್ಘ ಕಾರ್ಯ ಸಾಧ್ಯವಾಗಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ವಿ.ಎನ್.ವಸಂತಕುಮಾರ್ ದಂಪತಿಗಳಿಗೆ ಸನ್ಮಾನ ನೆರವೇರಿಸಿದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ದೇವಾಲಯ ಕಟ್ಟುವುದು ಸುಲಭ, ದೇವಸ್ಥಾನ ಹಾಗೂ ದೇವರ ಕಾರ್ಯಗಳನ್ನು ಸುಸೂತ್ರವಾಗಿ, ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಕಷ್ಟಕರ ಕೆಲಸ. ಜೀವನದ ನಡುವೆ ಸುದೀರ್ಘ ಧಾರ್ಮಿಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಕಳೆದ 45 ವರ್ಷಗಳಿಂದ ನಿಭಾಯಿಸಿಕೊಂಡು ಬಂದಿರುವುದು ಮಹತ್ಕಾರ್ಯ ಎಂದರು. ಸೇವೆಯನ್ನು ಪರಿಗಣಿಸಿ ಊರಿನ ಸಂಘಸಂಸ್ಥೆಗಳು, ಗಣ್ಯರು ಅಭಿಮಾನದಿಂದ ಹಮ್ಮಿಕೊಂಡಿರುವ ಪೌರ ಸನ್ಮಾನ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ ಎಂದರು. ದೇವಾಲಯ ಸಮಿತಿ ನಿರ್ದೇಶಕ ವಿ.ಪಿ.ಶಶಿಧರ್ ಮಾತನಾಡಿ, ಊರು ಹಾಗೂ ದೇವಾಲಯ ಮತ್ತಷ್ಟು ಅಭಿವೃದ್ಧಿಗೊಂಡು ಸಮೃದ್ದಿ ಕಾಣಬೇಕಿದೆ, ಧರ್ಮ ಹಾಗೂ ಸಂಸ್ಕೃತಿ, ಸದಾ ನೆಲೆನಿಲ್ಲಲು ಸೇವೆ ಸಲ್ಲಿಸುವಂತಹ ವಾತಾವರಣ ವೃದ್ದಿಸಬೇಕೆಂಬ ವಸಂತಕುಮಾರ್ ಅವರ ಆಶಯ ಮುಂದುವರೆಯಲಿ ಎಂದರು. ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಂ.ಕೆ.ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಇತಿಹಾಸ ಹಾಗೂ ವಿ.ಎನ್.ವಸಂತಕುಮಾರ್ ಅವರ ಕೊಡುಗೆ ಹಾಗೂ ಸೇವೆಯ ಬಗ್ಗೆ ಮಾಹಿತಿ ನೀಡಿದರು. ವಸಂತಕುಮಾರ್ ಅವರು ದೇವರ ಸೇವೆಗೆ ತಮ್ಮನ್ನು ಪ್ರಾಮಾಣಿಕವಾಗಿ ಸಮರ್ಪಿಸಿಕೊಂಡಿದ್ದರು. ನಾಲ್ಕು ಶತಮಾನಗಳ ಇತಿಹಾಸ ಹೊಂದಿರುವ ಗಣಪತಿ ದೇವಾಲಯದ ಅಭಿವೃದ್ಧಿಗೆ ವಸಂತಕುಮಾರ್ ಅವರ ಕೊಡುಗೆ ಅನನ್ಯ ಎಂದ ತಿಳಿಸಿದರು. ಸಮಿತಿ ಉಪಾಧ್ಯಕ್ಷ ಆರ್.ಬಾಬು, ನಿರ್ದೇಶಕ ಟಿ.ಆರ್.ಶರವಣಕುಮಾರ್, ಪ್ರಧಾನ ಅರ್ಚಕರಾದ ಆರ್ ಕೆ ನಾಗೇಂದ್ರ, ಉದ್ಯಮಿ ಎಸ್ ಎಲ್ ಎನ್ ವಿಶ್ವನಾಥನ್ ಮಾತನಾಡಿದರು. ಇದೇ ಸಂದರ್ಭ ನಿವೃತ್ತರಾಗಿರುವ ಸಮಿತಿಯ ಪದಾಧಿಕಾರಿಗಳನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಂಘಸಂಸ್ಥೆಗಳ ಪ್ರಮುಖರು ವಸಂತಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ್, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕರಾದ ವಿ.ಡಿ.ಪುಂಡರೀಕಾಕ್ಷ, ಹೆಚ್.ಎಂ.ಚಂದ್ರು ಇದ್ದರು.