ಸೋಮವಾರಪೇಟೆ NEWS DESK ಸೆ.10 : ಮಾಸಿಕ ಸಂಬಳಕ್ಕೆ ಆಗ್ರಹಿಸಿ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ ಡಿ ಗ್ರೂಪ್ ನೌಕರರು ಮಂಗಳವಾರ ಸೋಮವಾರಪೇಟೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಕಳೆದ 5 ತಿಂಗಳಿನಿಂದ ಸಂಬಳ ನೀಡಿಲ್ಲ. ಕಸ ಗುಡಿಸಿ, ಸ್ವಚ್ಚತೆ ಮಾಡುವ ನಮಗೆ ಜೀವನ ಸಾಗಿಸುವುದೆ ಕಷ್ಟವಾಗಿದೆ ಎಂದು ಪ್ರತಿಭಟನಾಕಾರರು ಸಂಕಟ ತೋಡಿಕೊಂಡರು. ಬೆಂಗಳೂರಿನ ಎಸ್‌ಎಲ್‌ಎನ್ ಸಂಸ್ಥೆ ಸಿಬ್ಬಂದಿಗಳನ್ನು ನೀಡುವ ಗುತ್ತಿಗೆ ಪಡೆದಿದ್ದು, 12 ಜನರು ಡಿ ಗ್ರೂಪ್ ನೌಕರರನ್ನು ನೇಮಿಸಿದ್ದಾರೆ. ಸಂಬಳವನ್ನೇ ನಂಬಿಕೊAಡು ಕೆಲಸ ಮಾಡುತ್ತಿರುವ ನಮಗೆ 5 ತಿಂಗಳಿನಿಂದ ಸಂಬಳ ನೀಡಿಲ್ಲ. ಕಳೆದ ಒಂದು ತಿಂಗಳ ಹಿಂದೆಯೇ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದೆವು. ಆದರೆ, ಪ್ರತಿಭಟನೆ ಬೇಡ, ಸಂಬಳ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಇಂದಿಗೂ ಸಂಬಳ ನೀಡಲು ಸಂಸ್ಥೆ ಮುಂದಾಗದ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಭವ್ಯ ತಿಳಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಇಂದೂಧರ್, ಸಮಸ್ಯೆ ಆಲಿಸಿದರು. ಸೋಮವಾರ ಸಂಬಳ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ, ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಸೋಮವಾರ ಸಂಬಳ ನೀಡದಿದ್ದಲ್ಲಿ ಕೆಲಸಕ್ಕೆ ಎಲ್ಲರೂ ಗೈರಾಗುವ ಮೂಲಕ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಸೇರಿದಂತೆ ಪದಾಧಿಕಾರಿಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.