ಮಡಿಕೇರಿ ಸೆ.16 NEWS DESK : ಒಕ್ಕಲಿಗ ಜನಾಂಗದ ವಿರುದ್ಧ ಹೇಳಿಕೆ ನೀಡಿರುವ ಮತ್ತು ಒಕ್ಕಲಿಗ ಮಹಿಳೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಸಿರುವ ಆರೋಪ ಎದುರಿಸುತ್ತಿರುವ ಶಾಸಕ ಮುನಿರತ್ನ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಸೋಮವಾರಪೇಟೆ ಅಧ್ಯಕ್ಷ ಎ.ಆರ್.ಮುತ್ತಣ್ಣ ಹಾಗೂ ಕುಶಾಲನಗರ ಅಧ್ಯಕ್ಷ ಎಂ.ಕೆ.ದಿನೇಶ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರುಗಳು ಒಕ್ಕಲಿಗ ಸಮುದಾಯದ ಬಗ್ಗೆ ಘರ್ಷಣೆಗೆ ಪ್ರಚೋದನೆ ಉಂಟು ಮಾಡುವ ರೀತಿಯಲ್ಲಿ ಮುನಿರತ್ನ ಅವರು ಮಾತನಾಡಿದ್ದಾರೆ ಮತ್ತು ಒಕ್ಕಲಿಗ ಮಹಿಳೆಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮೂಡಿಸುವ ಜವಾಬ್ದಾರಿ ಹೊತ್ತಿರುವ ಜನಪ್ರತಿನಿಧಿಯೊಬ್ಬರು ತಮ್ಮ ಲಾಭಕ್ಕಾಗಿ ಜನಾಂಗಗಳ ನಡುವೆ ದ್ವೇಷ ಹುಟ್ಟಿಸಲು ಮುಂದಾಗಿರುವುದು ಖಂಡನೀಯ. ಒಕ್ಕಲಿಗ ಸಮಾಜ ಮತ್ತು ಒಕ್ಕಲಿಗ ಮಹಿಳೆಯ ಬಗ್ಗೆ ಮುನಿರತ್ನ ಅವರು ನೀಡಿರುವ ಕೀಳು ಮಟ್ಟದ ಹೇಳಿಕೆಯನ್ನು ಯಾರೂ ಸಮರ್ಥಿಸಬಾರದು ಎಂದು ಒತ್ತಾಯಿಸಿದ್ದಾರೆ. ಗುತ್ತಿಗೆದಾರರಿಗೆ ಬೆದರಿಕೆ ಹಾಕಿರುವುದು, ಎರಡು ಸಮುದಾಯಗಳ ನಡುವೆ ದ್ವೇಷ ಮೂಡಿಸಲು ಮುಂದಾಗಿರುವುದು ಮತ್ತು ಒಕ್ಕಲಿಗ ಮಹಿಳೆಯನ್ನು ಕೀಳಾಗಿ ಕಂಡಿರುವ ಆರೋಪ ಎದುರಿಸುತ್ತಿರುವ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಮುನಿರತ್ನ ಅವರು ಇಡೀ ಒಕ್ಕಲಿಗ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಎಸ್.ಎಂ.ಚಂಗಪ್ಪ, ಎ.ಆರ್.ಮುತ್ತಣ್ಣ ಹಾಗೂ ಎಂ.ಕೆ.ದಿನೇಶ್ ಆಗ್ರಹಿಸಿದ್ದಾರೆ.