ಸಿದ್ದಾಪುರ NEWS DESK ಸೆ.24 : ಸೂರಿಗಾಗಿ ಸಮರ ಘೋಷವಾಕ್ಯದೊಂದಿಗೆ ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯ ವ್ಯಾಪಿ ನಡೆಸುತ್ತಿರುವ ಹೋರಾಟದ ಭಾಗವಾಗಿ ಪೊನ್ನಂಪೇಟೆ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಕಛೇರಿ ಎದುರು ಪಕ್ಷದ ಕೊಡಗು ಘಟಕ ಪ್ರತಿಭಟನೆ ನಡೆಸಿತು. ಜಿಲ್ಲೆಯಲ್ಲಿರುವ ಬಡವರಿಗೆ ನಿವೇಶನ ನೀಡಬೇಕು. ವಸತಿ ರಹಿತರ ನೋಂದಣಿ ಕಾರ್ಯ ಸ್ಥಗಿತಗೊಂಡಿದ್ದು, ಇದನ್ನು ಪುನರಾರಂಭಿಸಬೇಕು ಎಂದು ಹೊರಾಟಗಾರರು ಒತ್ತಾಯಿಸಿದರು. ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನಿವೇಶನ ರಹಿತರು, ಕಮ್ಯುನಿಷ್ಟ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಭಾರತ ಕಮ್ಯುನಿಷ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್ ಮಾತನಾಡಿ ಸೂರಿಗಾಗಿ ಸಮರ ಘೋಷಣೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಒದಗಿಸುವಂತೆ ಪಕ್ಷದ ವತಿಯಿಂದ ರಾಜ್ಯವ್ಯಾಪ್ತಿ ಹೋರಾಟ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಒತ್ತುವರಿದಾರರಿಗೆ ಭೋಗ್ಯಕ್ಕೆ ಸರ್ಕಾರಿ ಜಮೀನು ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಇದು ನಿವೇಶನ ರಹಿತ ಬಡವರ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು. ಮೊದಲು ಬಡವರಿಗೆ ನಿವೇಶನ ಹಂಚುವ ಕಾರ್ಯ ಸರ್ಕಾರದಿಂದ ಆಗಬೇಕು ಮಾಡಬೇಕು ಎಂದು ಒತ್ತಾಯಿಸಿದರು. ಪಕ್ಷದ ರಾಜ್ಯ ಸಮಿತಿ ಸದಸ್ಯ ಸಂತೋಷ್ ಮಾತನಾಡಿ, ಅಧಿಕಾರಿಗಳು ಬಡವರ ಅರ್ಜಿಗಳನ್ನು ವಿಲೇವಾರಿ ಮಾಡದೆ ದಿನ ದೂಡುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನ ರಹಿತರ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಇದನ್ನು ಪುನರಾರಂಭಿಸಬೇಕು ಹಾಗೂ ನೋಂದಾಯಿಸಿದ ಫಲಾನುಭವಿಗಳ ವಿವರವನ್ನು ಬಹಿರಂಗ ಪಡಿಸಬೇಕು ಒತ್ತಾಯಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್ ಮಾತನಾಡಿ, ನಿವೇಶಕ್ಕಾಗಿ 15ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲಿ ಸುಮಾರು 4 ಸಾವಿರ ಕುಟುಂಬಗಳಿಗೆ ತಲೆ ಮೇಲೊಂದು ಸೂರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಹಕಾರ್ಯದರ್ಶಿ ರಫೀಕ್, ಅಖಿಲ ಭಾರತ ದಲಿತ ಆಂದೋಲನದ ರಾಜ್ಯ ಮಂಡಳಿ ಸದಸ್ಯ, ರಮೇಶ್, ಪೊನ್ನಂಪೇಟೆ ತಾಲೂಕು ಕಾರ್ಯದರ್ಶಿ ಶಾಂತಿ, ಸೋಮವಾರ ಪೇಟೆ ತಾಲೂಕು ಕಾರ್ಯದರ್ಶಿ ಶಭಾನ,ಕಟ್ಟಡ ಕಾರ್ಮಿಕರ ಜಿಲ್ಲಾ ಕಾರ್ಯದರ್ಶಿ ಎಂ,ಎ, ಕೃಷ್ಣ,ಮಂಜುಳ, ಬಾಬು ಆಂಟೋನಿ, ಶಾಜಿ, ಸೆಬಾಸ್ಟಿಯನ್ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕಿ ಸ್ವರೂಪ ಅವರಿಗೆ ಪ್ರತಿಭಟನಾಕಾರರು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.