ಮಡಿಕೇರಿ ಸೆ.24 NEWS DESK : ಮಡಿಕೇರಿಯ ಅಶೋಕಪುರ ಗಣಪತಿ ಉತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿ ವಿಸರ್ಜನೋತ್ಸವವು ಸಂಭ್ರಮದಿಂದ ನಡೆಯಿತು. 50ನೇ ವರ್ಷದ ಗಣೇಶೋತ್ಸವ ಸಂಭ್ರಮದಲ್ಲಿರುವ ಅಶೋಕಪುರದ ಗಣಪತಿ ಉತ್ಸವ ಸಮಿತಿ ಅಲ್ಲಿನ ಶ್ರೀ ಅನ್ನಪೂರ್ಣೆಶ್ವರಿ ದೇಗುಲದಲ್ಲಿ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿಗಳನ್ನು ಮಂಟಪದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿತು.
ಮಂಟಪದಲ್ಲಿ ‘ಗಣಪತಿಯಿಂದ ಶತಮಹಿಷಿಯ ಸಂಹಾರ” ಎಂಬ ಕಥಾ ಸಾರಾಂಶವನ್ನು ಅಳವಡಿಸಲಾಗಿತ್ತು. ಗಣೇಶ ಸೇರಿದಂತೆ ದೇವಾನು ದೇವತೆ, ಅಸುರರ ಕಲಾಕೃತಿಗಳು ಮಂಟಪದ ಅಂದವನ್ನು ಹೆಚ್ಚಿಸಿದವು. ರಂಗುರಂಗಿನ ಕಾಗದದ ಸ್ಪೋಟಕಗಳು, ಚಿಮ್ಮುವ ಬೆಂಕಿ, ಪಟಾಕಿಗಳು ಮೈನವಿರೇಳುವಂತೆ ಮಾಡಿದವು. ಗಜಾನನನಿಂದ ಶತಮಹಿಷಿಯ ಸಂಹಾರ ಕಥಾ ಸಾರಾಂಶವನ್ನು ಸಮಿತಿ ಮನಮೋಹಕವಾಗಿ ಪ್ರಸ್ತುತಪಡಿಸಿತು.
ಅಶೋಕಪುರದಿಂದ ಹೊರಟ ಮಂಟಪ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಇಂದಿರಾಗಾಂಧಿ ವೃತ್ತದಲ್ಲಿ ಜನರಿಗೆ ಪ್ರದರ್ಶನ ನೀಡಿತು. ಅದ್ದೂರಿಯಾಗಿ ನಡೆದ ಗಣೇಶ ವಿಜರ್ಸನೆ ಶೋಭಾಯಾತ್ರೆಗೆ ನಗರ ಸೇರಿದಂತೆ ವಿವಿಧೆಡೆಗಳಿಂದ ಜನರು ಆಗಮಿಸಿ ಕಟ್ಟಡ, ರಸ್ತೆ ಬದಿಗಳಲ್ಲಿ ನಿಂತು ಮಂಟಪವನ್ನು ವೀಕ್ಷಿಸಿದರು. ನಂತರ ಓಂಕಾರೇಶ್ವರ ದೇವಾಲಯ ಸಮೀಪದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಪೊಲೀಸ್ ಇಲಾಖೆಯಿಂದ ಬಂದೋಬಸ್ ಕಲ್ಪಿಸಲಾಗಿತ್ತು.