ಕಣಿವೆ ಸೆ.24 NEWS DESK : ತಲಾ ತಲಾಂತರಗಳಿಂದ ಅರಣ್ಯದೊಳಗೆ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಜೇನುಕುರುಬ ಹಾಗೂ ಕೊರಗ ಸಮುದಾಯದ ಗಿರಿಜನರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವೊಂದು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ ಎಂದು ಆರೋಪಿಸಿ ಸರ್ಕಾರಗಳ ಧೋರಣೆಗಳ ವಿರುದ್ಧ ಬೃಹತ್ ಜನಾಂದೋಲನ ರೂಪಿಸಿ ಪ್ರತಿಭಟನೆ ನಡೆಸುವ ಸಂಬಂಧ ಕೊಡಗು, ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಆದಿವಾಸಿ ಪ್ರಮುಖರ ಸಭೆ ಬಸವನಹಳ್ಳಿಯಲ್ಲಿ ನಡೆಯಿತು. ಆದಿವಾಸಿಗಳ ಸಮುದಾಯದ ರಾಜ್ಯ ನಾಯಕ ಜೆ.ಟಿ.ರಾಜಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರು ಜಿಲ್ಲೆಗಳ 50ಕ್ಕೂ ಹೆಚ್ಚು ಆದಿವಾಸಿ ಪ್ರಮುಖರು ಪಾಲ್ಗೊಂಡಿದ್ದರು. ಪ್ರಾಚೀನ ಕಾಲದಿಂದಲೂ ಅರಣ್ಯದಲ್ಲಿ ವಾಸಿಸುತ್ತಾ ಬದುಕು ನಡೆಸಿಕೊಂಡು ಬರುತ್ತಿರುವ ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಪ್ರಾಚೀನ ಬುಡಕಟ್ಟು ಗುಂಪನ್ನು ಸರ್ಕಾರಗಳು ಅನೇಕ ದಶಕಗಳಿಂದಲೂ ಕಡೆಗಣಿಸುತ್ತಲೇ ಬಂದಿವೆ. ಹುಲಿ ಸಂರಕ್ಷಣಾ ಯೋಜನೆ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಯ ಹೆಸರಿನಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಪರಿಸರವಾದಿಗಳ ಮಾತು ಕೇಳಿ ಗಿರಿಜನರನ್ನು ಒಕ್ಕಲೆಬ್ಬಿಸಲು ನಡೆಸಿರುವ ಹುನ್ನಾರದ ವಿರುದ್ಧ ಶೀಘ್ರದಲ್ಲಿಯೇ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭ ಮೂರು ಜಿಲ್ಲೆಗಳ ಆದಿವಾಸಿಗಳ ಸಭೆಯನ್ನು ಆಯೋಜಿಸಿದ್ದ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆದ ಕೊಡಗು ಜಿಲ್ಲಾ ಉಸ್ತುವಾರಿ ಜೆ.ಟಿ.ಕಾಳಿಂಗ ಮಾತನಾಡಿ, ನೈಜವಾದ ಅರಣ್ಯವನ್ನು ವಾಸ್ತವವಾಗಿ ಸಂರಕ್ಷಣೆ ಮಾಡಿರುವ ಆದಿವಾಸಿಗಳನ್ನು ಯೋಜನೆಗಳ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಸರ್ಕಾರ ಮುಂದಾದರೆ ಬಹು ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ.
ಡ್ರೋಣ್ ಕ್ಯಾಮರಾಗಳ ಮೂಲಕ ಅಡಿಕೆ, ಶುಂಠಿ ಹಾಗೂ ರಬ್ಬರ್ ತೋಟಗಳಿಗೆ ರಸಾಯನ ಸಿಂಪಡಿಸುವ ಮೂಲಕ ಪರಿಸರವನ್ನು ನಾಶ ಮಾಡುತ್ತಿರುವುದು ಈ ಪರಿಸರವಾದಿಗಳಿಗೆ ಕಾಣಿಸುತ್ತಿಲ್ಲವೇ ? ಯಾಕಾಗಿ ನಮ್ಮ ಆದಿವಾಸಿಗಳಿಗೆ ಪದೇ ಪದೇ ತೊಂದರೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದಿವಾಸಿಗಳ ಸಂಘದ ರಾಷ್ಟ್ರೀಯ ಸಂಘಟನಾ ಸದಸ್ಯ ನಾಗಪುರದ ಜೆ.ಕೆ.ಪ್ರಕಾಶ್, ಮೈಸೂರು ಜಿಲ್ಲಾ ಆದಿವಾಸಿಗಳ ಸಂಘದ ಅಧ್ಯಕ್ಷ ಬಸವಣ್ಣಾ, ಹುಣಸೂರು ತಾಲ್ಲೂಕು ಅಧ್ಯಕ್ಷ ಬಾಬು ನೇರಳ ಕುಪ್ಪೆ, ದಕ್ಷಿಣ ಕನ್ನಡ ಜಿಲ್ಲೆಯ ಕೊರಗು ಸಮುದಾಯದ ಅಧ್ಯಕ್ಷ ಶಶಿಕಲಾ, ಉಡುಪಿ ಜಿಲ್ಲಾ ಮುಖಂಡ ಸುಂದರ್, ನಾಗರಹೊಳೆಯ ಜೆ.ಕೆ.ತಿಮ್ಮ, ಸಭೆಯಲ್ಲಿ ಜೇನು ಕುರುಬರ ಅಭಿವೃದ್ದಿ ಸಂಘದ ಅಧ್ಯಕ್ಷ ಸೋಮಯ್ಯ, ತಿತಿಮತಿಯ ಪುಷ್ಪ, ರವಿ ಮತ್ತಿತರರು ಹಾಜರಿದ್ದರು.