ಮಡಿಕೇರಿ ಅ.5 NEWS DESK : ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಸಹಕಾರ ತರಬೇತಿ ಕೇಂದ್ರದ ವಿದ್ಯಾರ್ಥಿಗಳೊಂದಿಗೆ ಸಹಕಾರ ಸಂಘದ ವಿಷಯಗಳ ಕುರಿತಾದ ಸಂವಾದ ಕಾರ್ಯಕ್ರಮವು ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್, ಸಹಕಾರ ಸಂಘದ ಬೆಳೆವಣಿಗೆ, ಆಡಳಿತ ಮಂಡಳಿಯ ಮುಖೇನ ಸಂಘದ ಅಭಿವೃದ್ಧಿಗೆ ಹಮ್ಮಿಕೊಳ್ಳುವ ವಿವಿಧ ಯೋಜನೆ, ಸಹಕಾರ ತತ್ವದ ನಿಯಮಾನುಸಾರ ಕೈಗೊಳ್ಳುವ ವಿಷಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಹಾಜರಿದ್ದ ಜಿಲ್ಲಾ ಸಹಕಾರ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಸಹಕಾರ ಸಂಘದ ಅಭಿವೃದ್ಧಿಗೆ ಪೂರಕವಾದ ಪ್ರಶ್ನೆಗಳಿಗೆ ಮತ್ತು ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಸಂವಾದದಲ್ಲಿ ಕೇಳಿದ ಪ್ರಶ್ನೆಗಳಿಗೆ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ನಾಗರಾಜು, ಕೆ.ಪಿ.ರಾಜು, ಕೆ.ಬಿ.ರಾಮಚಂದ್ರ, ಜಯಶ್ರೀ, ಎಸ್.ಎಸ್.ಕೃಷ್ಣ, ಜಿಲ್ಲಾ ಸಹಕಾರ ತರಬೇತಿ ಕೇಂದ್ರ ಪ್ರಾಂಶುಪಾಲೆ ಡಾ.ರೇಣುಕಾ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಪಿ.ಮೀನಾ, ಕೇಂದ್ರದ ಉಪನ್ಯಾಸಕ ಸಂಜಯ್ ಸೇರಿದಂತೆ ತರಬೇತಿ ಕೇಂದ್ರ ವಿದ್ಯಾರ್ಥಿಗಳು ಹಾಜರಿದ್ದರು.