ವಿರಾಜಪೇಟೆ ಅ.17 NEWS DESK : ಹೃದಯಾಘಾತದ ಚಿಕಿತ್ಸಾ ವಿಧಾನಗಳಲ್ಲಿ ಒಂದಾದ ಸಿಪಿಆರ್ ಚಿಕಿತ್ಸಾ ವಿಧಾನದ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು ಎಂದು ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಸಲಹೆ ನೀಡಿದರು. ಜೆಎಸ್‌ಎಸ್ ಆಸ್ಪತ್ರೆ ತುರ್ತು ವಿಭಾಗ ಮತ್ತು ಐಸಿಎಟಿಟಿ ಫೌಂಡೇಶನ್, ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಯುವ ರೆಡ್ ಕ್ರಾಸ್ ಹಾಗೂ ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಹೃದಯ ಶ್ವಾಶಕೋಷದ ಪುನರುಜೀವನ ಚಿಕಿತ್ಸೆ (ಸಿಪಿಆರ್) ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತದ ಜೀವನ ಶೈಲಿಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಅದರ ಚಿಕಿತ್ಸ ವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ. ಸಿಪಿಆರ್ ಸಹಾಯದಿಂದ ಹೃದಯಾಘಾತ ತಡೆಗಟ್ಟಲು ಸಾಧ್ಯ. ಉತ್ತಮ ದೈಹಿಕ ವ್ಯಾಯಾಮ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎಂದರು. ಮೈಸೂರು ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾದ್ಯಾಪಕರು ಹಾಗೂ ವೈದ್ಯರಾದ ಡಾ.ಆದರ್ಶ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನಿಯಮಿತ ಆಹಾರ, ವ್ಯಾಯಾಮ, ಯೋಗ, ದೈಹಿಕ ಚಟುವಟಿಕೆಗಳಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೃದಯಾಘಾತ ಸಂಭವಿಸುವ ಸಂದರ್ಭದಲ್ಲಿ ಸಿಪಿಆರ್ ಮಾಡುವುದರಿಂದ ವ್ಯಕ್ತಿಯನ್ನು ಬದುಕಿಸಲು ಸಾಧ್ಯ. ಸಿಪಿಆರ್ ನ ಜ್ಞಾನ ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎಂದರು.
ತರಬೇತಿ ಕಾರ್ಯಕ್ರಮ : : ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಕ್ಯಾಂಡರ್ ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳು ಸಿಪಿಆರ್ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಮೈಸೂರು ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾದ್ಯಾಪಕರು ಹಾಗೂ ವೈದ್ಯರುಗಳಾದ ಡಾ.ಆದರ್ಶ್, ಡಾ.ನಯನ್, ಡಾ.ಅರ್ಪಿತಾ ಸಿಪಿಆರ್ ಚಿಕಿತ್ಸಾ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಅಲ್ಲದೆ ಚಿಕಿತ್ಸಾ ಸಮಯ, ಅನುಸರಿಸಬೇಕಾದ ಕ್ರಮಗಳ ಕುರಿತು ಸಂಕ್ಷಿಪ್ತವಾದ ಮಾಹಿತಿ ನೀಡಿದರು. ಬೆಂಗಳೂರಿನ ಕ್ಯಾಡರ್ ಇಂಟನ್ರ್ಯಾಷನಲ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಕ್ಮೊ ಸ್ಪೆಷಲಿಸ್ಟ್ ಡಾ.ನಿರಂಜನ್ ವಿದ್ಯಾರ್ಥಿಗಳಿಗೆ ಸಿಪಿಆರ್ ಬಗ್ಗೆ ತರಬೇತಿ ನೀಡಿದರು. ಈ ಸಂದರ್ಭ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಎನ್.ಎಸ್.ಎಸ್. ಅಧಿಕಾರಿ ಬಿ.ಎನ್.ಶಾಂತಿಭೂಷಣ್, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.