ಚೆಟ್ಟಳ್ಳಿ ಅ.29 NEWS DESK : ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಐನ್ ಮನೆಯಲ್ಲಿ ಒಂದೇ ಕುಟುಂಬದ ಐದು ತಲೆಮಾರಿನ ಕುಟುಂಬದವರು ಪತ್ತಲೋದಿ ದಿನ ನೂರಾಂಡ್ ನಮ್ಮೆಯನ್ನು ಆಚರಿಸಿದರು. ಕೊಡಗಿನ ಹಲವು ಐನ್ ಮನೆಗಳಿಗೆ ಶತಮಾನಗಳ ಇತಿಹಾಸವಿರುವಂತೆ ಚೆಟ್ಟಳ್ಳಿಯ ಪುತ್ತರಿರ ಕುಟುಂಬದ (ಪುದಿಯ ಮನೆ) ಮನೆಗೆ ನೂರನೇ ವರ್ಷ ತುಂಬಿತ್ತು. ಅಜ್ಜ, ಮುತ್ತಜ್ಜರು, ತಂದೆ-ತಾಯಿ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ವಿವಾಹವಾಗಿ ಕೊಟ್ಟ ಹೆಣ್ಣು ಮಕ್ಕಳ ಕುಟುಂಬ ಪತ್ತಲೋದಿ ದಿನ ಒಟ್ಟಾಗಿ ಐನ್ ಮನೆಯಲ್ಲಿ ಸೇರಿ ನೆಲ್ಲಕ್ಕಿ ನಡುಬಾಡೆಯಲ್ಲಿ ಮೀದಿ ನೀರಿಟ್ಟು ಒಳಿತು ಮಾಡಲೆಂದು ಪುತ್ತರಿರ ಕಾಶಿ ಸುಬ್ಬಯ್ಯ ಪ್ರಾರ್ಥಿಸಿದರು. ನಂತರ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಕ್ರೀಡೆ ನಡೆಯಿತು. ನೂರಾಂಡ್ ನಮ್ಮೆಯ ವಿಶೇಷತೆ ಬಗ್ಗೆ ಪುತ್ತರಿರ ದೇವಿದೇವಯ್ಯ ತಿಳಿಸಿದರು. ಈ ಕುಟುಂಬದ ಮೂಲಪುರುಷರಾದ ದಿ.ಪುತ್ತರಿರ ಗಣಪತಿ, ದಿ.ಪುತ್ತರಿರ ಕುಶಾಲಪ್ಪ ಹಾಗೂ ದಿ.ಪುತ್ತರಿರ ಚಿಣ್ಣಪ್ಪ ಅವರ ಜೀವನ ಸಾಧನೆಯನ್ನು ಪುತ್ತರಿರ ಗಣೇಶ್ ಭೀಮಯ್ಯ ನೆನೆಸುತ್ತಾ ಹಿರಿಯದ ಆದರ್ಶವನ್ನು ನಾವೆಲ್ಲರು ಪಾಲಿಸು ವಂತಾಗ ಬೇಕೆಂದರು. ವಿವಿಧ ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.