ಕುಶಾಲನಗರ ಅ.29 NEWS DESK : ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 2023- 24ನೇ ಸಾಲಿನ ಮೊದಲ ಗ್ರಾಮ ಸಭೆಯು ಸಿದ್ದಲಿಂಗಪುರದ ಸಮುದಾಯ ಭವನ ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷೆ ಶೋಭಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಜೀವನ್ ಕುಡಿಯುವ ನೀರಿನ ಕಾಮಗಾರಿ ಕುರಿತು ಚರ್ಚಿಸಲಾಯಿತು. ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಜಲಜೀವನ್ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಾಮಗಾರಿಯು ಸಮರ್ಪಕವಾಗಿ ನಡೆದಿಲ್ಲಾ ಅಲ್ಲದೇ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಇದರ ಬಗ್ಗೆ ವಿಸ್ತಾರವಾದ ವರದಿಯನ್ನು ನೀಡುವಂತೆ ಗ್ರಾಮಸ್ಥರಾದ ಟಿ.ಕೆ ಪಾಂಡುರಂಗ, ಪಿ.ಡಿ.ರವಿ ಮೂರ್ತಿ ಒತ್ತಾಯಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರುದ್ರಭೂಮಿ, ಆನೆ ಕಂದಕಗಳು, ವಸತಿ ರಹಿತರಿಗೆ ಕಾಯ್ದಿರಿಸಿದ ಜಾಗದಲ್ಲಿ ವಸತಿ ಸೌಕರ್ಯಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ತೊರೆನೂರು ಗ್ರಾಮ ಪಂಚಾಯತಿ ಕಟ್ಟಡದ ಸಮೀಪದಲ್ಲಿ ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆ ಇದ್ದರೂ ಸಿಬ್ಬಂದಿ ಗಳ ನೇಮಕಾತಿ ಇಲ್ಲಾದೆ ಪಶು ಆಸ್ಪತ್ರೆಯಿಂದ ಹೈನುಗಾರರಿಗೆ ದೊರಕದ ವ್ಯವಸ್ಥೆಯಾಗಿದೆ ಅಲ್ಲದೇ ನೀರಾವರಿ ಸೌಲಭ್ಯದ ಕಾಲುವೆಗಳ ದುರಸ್ತಿ ಆಗದಿರುವ ಬಗ್ಗೆ ಗ್ರಾಮಸ್ಥರಾದ ಪಿ.ಡಿ.ರವಿ, ಜಗದೀಶ್, ಕೃಷ್ಣ ಗೌಡ, ರಾಮಕೃಷ್ಣ, ಮಹದೇವ, ಸುದೇಶ್, ಮೂರ್ತಿ ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ಹಾಜರಿದ್ದು ಸಮಗ್ರ ಚರ್ಚೆಗಳನ್ನು ನಡೆಸಿದರು. ಸಭೆಗೆ ಹಾಜರಿದ್ದ ಹಲವು ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು. ಸಭೆಯ ನೋಡಲ್ ಅಧಿಕಾರಿಯಾಗಿ ತಾಲ್ಲೂಕು ಅಕ್ಷರ ದಾಹೋಸದ ಅಧಿಕಾರಿ ಕಾಳನಾಯಕ್ ವಹಿಸಿದರು. ಸಭೆಯಲ್ಲಿ ಪಂಚಾಯತಿ ಉಪಾಧ್ಯಕ್ಷೆ ರೂಪ ಮಹೇಶ್ ಸದಸ್ಯರಾದ ಬೇಬಿಯಣ್ಣ, ಶಿವಕುಮಾರ್, ದೇವರಾಜ್, ಪ್ರಕಾಶ್, ಯಶೋದ್ ಸಾವಿತ್ರಿ, ನಿಂಗಜಮ್ಮ, ಮಹದೇವ್, ಕೆ.ಡಿ.ಪಿ.ಸದಸ್ಯ ಜಗದೀಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಸಂಜೀವಯ್ಯ, ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು, ಅಭಿವೃದ್ಧಿ ಅಧಿಕಾರಿ ಶ್ಯಾಮ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು. ಅಭಿವೃದ್ಧಿ ಅಧಿಕಾರಿ ಶ್ಯಾಮ್ ಸ್ವಾಗತಿಸಿ, ವಂದಿಸಿದರು.