ಮಡಿಕೇರಿ ನ.1 NEWS DESK : ಕೊಡಗು ವಿಶ್ವವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪ್ರೊ.ಎಂ.ಪಿ. ಕೃಷ್ಣ ಧ್ವಜಾರೋಹಣ ನೆರವೇರಿಸಿದರು. ನಂತರ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಪ್ರಾಂಶುಪಾಲ ಪ್ರೊ. ಎಂ.ಪಿ.ಕೃಷ್ಣ ಅವರು ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಇಂತಹ ಕನ್ನಡಾಭಿಮಾನ ಮೂಡಿಸುವ ಚಟುವಟಿಕೆಗಳು ನಡೆಯುವಂತೆ ವಿಶೇಷ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಗಣಕ ವಿಜ್ಞಾನ ವಿಭಾಗದ ಎಂ.ಎನ್.ರವಿಶಂಕರ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ರಾಜ್ಯ ಭಾಷೆಯಾಗಿರಬೇಕಾದದ್ದು ಸಹಜ. ಆದರೆ ಈಗ ಕನ್ನಡದ ಅವಶ್ಯಕತೆಯ ಬಗ್ಗೆ ಮಾತಾಡಬೇಕಾಗಿ ಬಂದದ್ದು ದುರದೃಷ್ಟಕರ. ಅಧ್ಯಯನ ವಿಷಯಗಳು ಯಾವುದೇ ಆಗಿರಲಿ ಮಾತೃಭಾಷೆಯ ಕುರಿತ ಅಭಿಮಾನಕ್ಕೆ ಎಂದೂ ಚ್ಯುತಿ ಬರಬಾರದು ಎಂದರು. ಇಡೀ ಕನ್ನಡ ಸಂಸ್ಕೃತಿಯ ಅಸ್ಥಿತ್ವ ಇರುವುದು ಆ ಭಾಷೆಯಲ್ಲಿ. ಹೀಗಾಗಿ ಪ್ರತಿಯೊಬ್ಬರು ಕನ್ನಡ ಭಾಷೆಯ ಕುರಿತು ಆಸಕ್ತಿಯನ್ನು, ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕನ್ನಡ ವಿಭಾಗದ ಡಾ.ಕರುಣಾಕರ ಮಾತನಾಡಿ, ಕಾಲೇಜುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡ ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯು ಕುಸಿಯುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದರು. ಇದು ಕೇವಲ ಉಪನ್ಯಾಸಕರ ಕೆಲಸದ ಅವಧಿಯ ಪ್ರಶ್ನೆಯಲ್ಲ, ಬದಲಾಗಿ ಕನ್ನಡ ಭಾಷೆಯ ಅಧ್ಯಯನ ಮತ್ತು ಸಂಸ್ಕೃತಿಗಳ ಉಳಿವಿನ ಪ್ರಶ್ನೆ ಎಂದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಿಂದಿ ವಿಭಾಗದ ಪ್ರೊ. ಶ್ರೀಧರ್ ಹೆಗ್ಡೆ ಮತ್ತು ಡಾ. ತಳವಾರ್ ಬಿ.ಹೆಚ್. ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶೈಲಶ್ರೀ ಕೆ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಡಾ.ರೇಣುಶ್ರೀ ಹೆಚ್.ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಟಿ.ವಿ.ವರ್ಷ ನಿರೂಪಣೆ ಮಾಡಿ, ಎಲ್. ತುಳಸಿ ವಂದಿಸಿದರು.