ಗೋಣಿಕೊಪ್ಪ NEWS DESK ನ.1 : ಪರಿಸರ ಮತ್ತು ವನ್ಯಜೀವಿಗಳನ್ನು ಪ್ರೀತಿಸುವ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಏಕಾಗ್ರತೆಯನ್ನು ಸಂಪಾದಿಸಬೇಕು ಎಂದು ಪತ್ರಕರ್ತ ಹಾಗೂ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಸಲಹೆ ನೀಡಿದ್ದಾರೆ. 69ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಪ್ರಯುಕ್ತ ಗೋಣಿಕೊಪ್ಪ ಲಯನ್ಸ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವನ್ಯಜೀವಿಗಳ ಕುರಿತು ಅವರು ವಿವರಿಸಿದರು. ಕಾಡುಪ್ರಾಣಿಗಳು ತಮ್ಮ ಬದುಕನ್ನು ವಿಶೇಷ ರೀತಿಯಲ್ಲಿ ನಡೆಸುತ್ತವೆ. ಮೂಕ ಪ್ರಾಣಿಗಳು ವಿಶೇಷ ಜ್ಞಾನವನ್ನು ಹೊಂದಿರುತ್ತವೆ. ಮಾನವನ ಕಲಹಕ್ಕೆ ಮಾತನಾಡುವ ಶಕ್ತಿಯೇ ಕಾರಣವಾಗಿದೆ. ಮೌನದಿಂದ ಏಕಾಗ್ರತೆ ಹೆಚ್ಚಾಗುತ್ತದೆ, ಏಕಾಗ್ರತೆಯಿಂದ ಓದುವ ಆಸಕ್ತಿ ಹೆಚ್ಚಾಗಿ ಜ್ಞಾನ ವೃದ್ಧಿಸುತ್ತದೆ ಎಂದರು. ಮೌಲ್ಯಾಧಾರಿತ ಬದುಕು ಸಾಗಿಸಲು ನಾವು ಉತ್ತಮ ಗೆಳೆಯರನ್ನು ಸಂಪಾದಿಸಬೇಕು. ಗೆಳೆಯರ ಸಹಕಾರದಿಂದ ನಾವು ಬಹುದೊಡ್ಡ ಸಾಧನೆಯನ್ನೇ ಮಾಡಬಹುದು, ಈ ಸತ್ಯವನ್ನು ನಾವು ಅರಿತಿರಬೇಕು ಎಂದು ರಮೇಶ್ ಉತ್ತಪ್ಪ ಕಿವಿಮಾತು ಹೇಳಿದರು. ಲಯನ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಟಿ.ಅಪ್ಪಣ್ಣ, ಉಪಾಧ್ಯಕ್ಷ ಧನು ಉತ್ತಯ್ಯ, ಕಾರ್ಯದರ್ಶಿ ಶ್ರೀಮಂತ್ ಮುತ್ತಣ್ಣ, ಖಜಾಂಚಿ ಎಂ.ಸಚಿನ್ ಬೆಳ್ಯಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲತಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಗಾನ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ತಂಗಮ್ಮ ಇದ್ದರು.









