ಪೊನ್ನಂಪೇಟೆ, ನ.27 NEWS DESK : ಬಿಳುಗುಂದ ಗ್ರಾ.ಪಂ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಕಾಫಿ ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ. ಇದರಿಂದ ಫಸಲಿಗೆ ಬಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ, ಅಡಿಕೆ, ಬಾಳೆ, ತೆಂಗು ಬೆಳೆಗಳು ನಾಶವಾಗಿದ್ದು, ಬೆಳಗಾರರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ಹೊಸಕೋಟೆ ಗ್ರಾಮದ ಬೆಳೆಗಾರರು ದೂರಿದ್ದಾರೆ. ಗ್ರಾಮದಂಚಿನ ಕಾಡು ಮತ್ತು ಪಾಳುಬಿಟ್ಟ ಕಾಫಿ ತೋಟಗಳಿಂದ ಬರುತ್ತಿರುವ ಕಾಡಾನೆಗಳು ಈ ಭಾಗದಲ್ಲಿ ರೈತರ ಬೆಳೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಆನೆ ಹಾವಳಿ ತಡೆಗೆ ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಬೆಳಗಾರರು ಆರೋಪಿಸಿದ್ದಾರೆ. ವರ್ಷವಿಡೀ ಕಷ್ಟಪಟ್ಟು ದುಡಿದ ಫಲವಾಗಿ ದೊರೆಯುವ ವಿವಿಧ ಬೆಳೆಗಳ ಫಸಲನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಇದಕ್ಕೆ ಕಾಡಾನೆಗಳ ನಿರಂತರ ಹಾವಳಿಯೇ ಪ್ರಮುಖ ಕಾರಣ. ಆನೆಗಳು ತೋಟಗಳಿಗೆ ನುಗ್ಗದಂತೆ ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ಕಾಡಾನೆಗಳ ಹಾವಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದರೂ ಇಲ್ಲಿನ ಬೆಳೆಗಾರರ ಸಮಸ್ಯೆಯನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಹೊಸಕೋಟೆಯ ತೋಟ ಮಾಲೀಕರಾದ ಡಿ.ಹೆಚ್. ಸೂಫಿ ಹಾಜಿ ಆರೋಪಿಸಿದ್ದಾರೆ. ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದೆಲ್ಲವೂ ಬೆಳಗಾರರ ಆರ್ಥಿಕ ವ್ಯವಸ್ಥೆಗೆ ತೀವ್ರ ದಕ್ಕೆ ಉಂಟು ಮಾಡುತ್ತಿದೆ ಎಂದು ಹೇಳಿರುವ ಸೂಫಿ ಹಾಜಿ, ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ಬೆಳೆಗಾರರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳ ನಿರಂತರ ಉಪಟಳವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಫಿ ಹಾಜಿ ಗ್ರಾಮದ ಬೆಳೆಗಾರರ ಪರವಾಗಿ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.