ನಾಪೋಕ್ಲು ನ.27 NEWS DESK : ಸರ್ವ ಸದಸ್ಯರು ಒಗ್ಗೂಡಿದರೆ ಮಾತ್ರ ಸಂಘದ ಬೆಳವಣಿಗೆ ಸಾಧ್ಯ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡಿರ ನಾಣಯ್ಯ ಹೇಳಿದರು. ನಾಪೋಕ್ಲು ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದಿಂದ ಎಲ್ಲರಿಗೂ ಪ್ರಯೋಜನವಾಗಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಎಲ್ಲಾ ಸದಸ್ಯರು ಒಗ್ಗೂಡಬೇಕು. ಹೋಬಳಿ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಮಾಜಿ ಸೈನಿಕರಿದ್ದಾರೆ. ಆದರೆ ಮಹಾಸಭೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಹೆಚ್ಚಿನ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರೆ ಸೈನಿಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದರು. ಸಂಘದ ಕಾರ್ಯದರ್ಶಿ ಕೇಟೋಳಿರ ಅಚ್ಚಪ್ಪ, ಖಜಾಂಚಿ ಕರೀಂ ಮಾತನಾಡಿ ವಾರ್ಷಿಕ ಲೆಕ್ಕ ಪತ್ರ ಮತ್ತು ಇತರ ವಿಷಯಗಳ ಬಗ್ಗೆ ಸದಸ್ಯರ ಪ್ರಶ್ನೆಗೆ ಉತ್ತರಿಸಿ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಲಾಯಿತು ಮತ್ತು ಮಹಾಸಭೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಎಲ್ಲ ಸದಸ್ಯರಿಗೆ ತಿಳುವಳಿಕೆ ನೀಡಿ ಕಡ್ಡಾಯವಾಗಿ ಹಾಜರಾಗುವಂತೆ ಮಾಡಿ ಎಂದು ಸದಸ್ಯರು ಸಲಹೆ ಸೂಚನೆ ನೀಡಿದರು. ಉಪಾಧ್ಯಕ್ಷ ಅಪ್ಪುಮಣಿಯಂಡ ನಾಣಯ್ಯ, ನಿರ್ದೇಶಕರಾದ ಪುಲ್ಲೇರ ಪಳಂಗಪ್ಪ, ಪಾಡಿಯಮ್ಮಂಡ ಅಪ್ಪಣ್ಣಮಯ್ಯ, ಅಮ್ಮಂಡ ಅಶೋಕ್, ಮುಂಡೋಟಿ ರ ಪಾರ್ವತಿ, ಕಂಬೆಯಂಡ ಅಪ್ಪಣ್ಣ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.