ಸೋಮವಾರಪೇಟೆ ನ.29 NEWS DESK : ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಹಾಗೂ ನಾವು ಪ್ರತಿಷ್ಠಾನದ ಸಹಯೋಗದೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ರೋಟರಿ ಸಂಸ್ಥೆ ಅಧ್ಯಕ್ಷ ಜೆ.ಕೆ.ಪೊನ್ನಪ್ಪ ಚಾಲನೆ ನೀಡಿ ಮಾತನಾಡಿ, ವಿಕಲಚೇತನರಿಗೆ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ನಾಗರಿಕ ಸಮಾಜವೂ ವಿಕಲಚೇತನರನ್ನು ಗೌರವದಿಂದ ಕಾಣಬೇಕು. ಸಾಧ್ಯವಾದರೆ ಹಣಕಾಸಿನ ಸಹಾಯವನ್ನು ಮಾಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿ ವಿಮಲ ಮಾತನಾಡಿ, ವಿಕಲಚೇತನರಲ್ಲೂ ಪ್ರತಿಭೆಯಿದೆ. ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಲು ಇಂತಹ ಕ್ರೀಡಾಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಶ್ವೇತ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ, ತಾಲ್ಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಸಂಗಮೇಶ್, ವಿವೇಕಾನಂದ ಯೂತ್ ಮೂವ್‍ಮೆಂಟ್ ತಾಲ್ಲೂಕು ಅಧ್ಯಕ್ಷೆ ಸುನಿತ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸಂಗೀತಾ ದಿನೇಶ್, ನಾವು ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಗೌತಮ್ ಕಿರಗಂದೂರು, ಶನಿವಾರಸಂತೆ ಸನ್ನಧಿ ಶಾಲೆಯ ವ್ಯವಸ್ಥಾಪಕ ನಿರಂಜನ್ ಇದ್ದರು. ಆಯುರ್ವೇದ ಆಸ್ಪತ್ರೆಯ ವತಿಯಿಂದ ಆರೋಗ್ಯ ತಪಾಸಣೆ ನಡೆಸಿ ಔಷಧಿ ವಿತರಿಸಲಾಯಿತು.