ನಾಪೋಕ್ಲು ನ.29 NEWS DESK : ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಕನ್ನಡ ಭಾಷೆ, ನಾಡು, ನುಡಿ, ಅತಿ ಉತ್ಕೃಷ್ಟವಾದದ್ದು. ಕನ್ನಡ ನಾಡು ನುಡಿ ಪರಂಪರೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು. ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ನಾಪೋಕ್ಲು ಹೋಬಳಿ ಘಟಕ ಹಾಗೂ ಸಹಕಾರ ಮಹಿಳಾ ಸಮಾಜ, ಪಿಪಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯಬೇಕು, ಕನ್ನಡ ನಾಡು ನುಡಿಯ ವಿಚಾರ ತಿಳಿಯಬೇಕು ಎಂದ ಅವರು, ಕನ್ನಡ ಗೀತೆಗಳನ್ನು ಹಾಡುವ ಮೂಲಕ ಅದರ ಅರಿವು ಅವರಿಗೆ ಮೂಡಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಮಡಿಕೇರಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿದಾಗ ನಾಪೋಕ್ಲು ಹೋಬಳಿಯ ಮೂರು ಶಾಲೆಗಳು ಪಾಲ್ಗೊಂಡಿದ್ದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳಲ್ಲಿ ಅಡಗಿದ ಪ್ರತಿಭೆ ಅನಾವರಣಗೊಳ್ಳಲು ಇದೊಂದು ಉತ್ತಮ ಅವಕಾಶ ಪಾಠದ ಜೊತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದರು. ಕನ್ನಡ ಧ್ವಜಾರೋಹಣ ನೆರವೇರಿಸಿದ ಕಾಫಿ ಬೆಳೆಗಾರ ಕೇಟೊಳಿರ ಕುಟ್ಟಪ್ಪ ಮಾತನಾಡಿ, ಜಾತಿ ಮತ ಭೇದ ಧರ್ಮವನ್ನು ಮರೆತು ಕನ್ನಡದ ವಿಚಾರಗಳಲ್ಲಿ ಒಗ್ಗಟ್ಟನ್ನು ಪ್ರವೇಶಿಸಬೇಕು ಎಂದ ಅವರು ಒಂದು ಕೊಡೆಯ ಆಸರೆಯಲ್ಲಿ ನಾವೆಲ್ಲ ನಿಂತಿದ್ದೇವೆ. ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಎಲ್ಲರೂ ಒಗ್ಗೂಡಬೇಕು. ಕನ್ನಡದಲ್ಲಿ ವ್ಯವಹಾರ ಮಾಡುವುದರಿಂದ ಇನ್ನಷ್ಟು ಭಾಷೆ ಬೆಳೆಯಲು ಸಹಕಾರಿಯಾಗಿದೆ ಎಂದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಕನ್ನಡದ ಕಾರ್ಯಕ್ರಮ ನಡೆದಾಗ ಸದಸ್ಯರೆಲ್ಲರೂ ಪಾಲ್ಗೊಳ್ಳಬೇಕು. ಹೆಚ್ಚು ಹೆಚ್ಚು ಸದಸ್ಯರು ಸಾಹಿತ್ಯ ಪರಿಷತ್ತಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಘಟನೆಗೆ ಹೆಚ್ಚಿನ ಸಹಕಾರದ ಅವಶ್ಯಕತೆ ಇದೆ ಎಂದು ಅವರು ಪಿ.ಪಿ.ಫೌಂಡೇಶನ್ ಪ್ರೋತ್ಸಾಹ ದಿಂದ ಕಡಂಗದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಕನ್ನಡ ಮನಸುಗಳ ಸಹಕಾರ ಇನ್ನಷ್ಟು ಅವಶ್ಯಕತೆ ಎಂದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಜಾನಪದ ಗೀತೆ, ಭಾವಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿ ವಿಜೇತರಾದವರಿಗೆ ಬಹುಮಾನ ಹಾಗೂ ಅರ್ಹತಾ ಪತ್ರವನ್ನು ವೇದಿಕೆಯಲ್ಲಿದ್ದ ಗಣ್ಯರು ವಿತರಿಸಿ ಶುಭ ಹಾರೈಸಿದರು. ಬೆಳಿಗ್ಗೆ ಕೆಪಿಎಸ್ ಶಾಲೆಯ ಆವರಣದಲ್ಲಿ ಕಾಫಿ ಬೆಳೆಗಾರ, ದಾನಿಗಳಾದ ಕೇಟೋಳಿರ ಕುಟ್ಟಪ್ಪ ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ಕೆಪಿಎಸ್ ಪ್ರೌಢಶಾಲೆಯಿಂದ ನಾಪೋಕ್ಲು ಪೆಟ್ರೋಲ್ ಬಂಕ್ ವರೆಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಕನ್ನಡ ಧ್ವಜ, ಬ್ಯಾಂಡ್ ವಾದ್ಯ ಗಳೊಂದಿಗೆ ವರ್ಣ ರಂಜಿತ ಮೆರವಣಿಗೆ ಜರುಗಿತು. ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೆರವಂಡ ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆರ್.ವನಜಾಕ್ಷಿ , ಸರಕಾರಿ ಸಹಕಾರಿ ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ನಾಪೋಕ್ಲು, ಕೆಪಿಎಸ್ ಪ್ರೌಢಶಾಲಾ ಉಪ ಪ್ರಾಂಶುಪಾಲ ಎಂ.ಎಸ್.ಶಿವಣ್ಣ, ಕಾಫಿ ಬೆಳೆಗಾರ, ಪಿ.ಪಿ.ಫೌಂಡೇಶನ್ ಅಧ್ಯಕ್ಷ ಪಿ.ಪಿ.ಅಹಮದ್, ಅರಫತ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮುನೀರ್ ಅಹಮದ್, ಹೋಬಳಿ ಕಸಾಪ ಗೌರವ ಕಾರ್ಯದರ್ಶಿ ಬಾಲೆಯಡ ದಿವ್ಯ ಮಂದಪ್ಪ, ಗೌರವ ಕಾರ್ಯದರ್ಶಿ ಉಮಾ ಪ್ರಭು, ಗೌರವ ಕೋಶಾಧಿಕಾರಿ ಎಂ.ಎ.ಮನ್ಸೂರ್ ಆಲಿ, ಸಂಘಟನಾ ಕಾರ್ಯದರ್ಶಿ ಸಿ.ಹೆಚ್.ಅಹಮದ್, ಗ್ರಾಮ ಪಂಚಾಯತಿ ಉಪ ಅಧ್ಯಕ್ಷ ಹೇಮಾ, ಯಶೋಧ ಕಟ್ಟಿ, ಅರುಣ್, ರಾಜ ದೇವಯ್ಯ, ಎನ್ಕೆ ಪ್ರಭು, ಬೊಳ್ಳಮ್ಮ ನಾಣಯ್ಯ, ಮಹಿಳಾ ಸಮಾಜದ ನಿರ್ದೇಶಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ವಿವಿಧ ಶಾಲೆಯ ಶಿಕ್ಷಕರು ಹಾಗೂ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವರು.
ವರದಿ : ದುಗ್ಗಳ ಸದಾನಂದ.













