ವಿರಾಜಪೇಟೆ ಡಿ.3 NEWS DESK : ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಟಿಯ 226 ಸಂಚಿಕೆ ಅರಮೇರಿ ಕಳಂಚೇರಿ ಮಠದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ ನನ್ನ ತಂದೆಯವರಾದ ದಿವಂಗತ ಡಿ.ಜೆ ಪದ್ಮನಾಭ ಅವರು ಕರ್ನಾಟಕ ಸಂಘವನ್ನು ನಿರ್ಮಾಣ ಮಾಡುವ ಸಮಯದಲ್ಲಿ ಅಂದಿನ ಕಾಲದಲ್ಲಿ ಮಠದ ವತಿಯಿಂದ ಹತ್ತು ಸಾವಿರ ರೂಗಳ ದೇಣಿಗೆಯನ್ನು ನೀಡಿದ್ದರು. ತಂದೆಯವರಿಗೆ ಮಠದೊಂದಿಗೆ ಉತ್ತಮ ಬಾಂಧವ್ಯವಿತ್ತು. ನನ್ನ ತಂದೆಯವರ ಬೆಳವಣಿಗೆಯಲ್ಲಿ ಮಠದ ಪಾತ್ರವೂ ಇದೆ ಎನ್ನುವುದನ್ನು ಸ್ಮರಣೆ ಮಾಡಲು ಬಯಸುತ್ತೇನೆ. ಮಾಧ್ಯಮಗಳು ಇಂದಿನ ಸಮಯದಲ್ಲಿ ಸಕಾರತ್ಮಕತೆಗಿಂತ ನಕಾರತ್ಮಕತೆಯನ್ನು ಹೆಚ್ಚು ಬಿತ್ತುತ್ತಿವೆ. ಹೀಗಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಜನರ ವಿಶ್ವಾಸವನ್ನು ಮಾಧ್ಯಮಗಳು ಕಳೆದುಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು. ಪತ್ರಕರ್ತೆ ಉಷಾಪ್ರೀತಮ್ ಮಾತನಾಡಿ, ಪ್ರಪಂಚದ ಯಾವ ಆವಿಷ್ಕಾರಗಳು ಮನುಕುಲಕ್ಕೆ ಕೆಡುಕು ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಬಂದಿರುವುದಿಲ್ಲ. ಹಾಗೇ ಇಂದು ನವಮಾಧ್ಯಮಗಳು ಕೆಡುಕನ್ನೇ ಬಯಸುತ್ತಿಲ್ಲ. ಆದರೆ ಅವುಗಳನ್ನು ಬಳಕೆ ಮಾಡುವ ಬಳಕೆದಾರರ ತಪ್ಪಿನಿಂದ ನವಮಾಧ್ಯಮಗಳು ನಮಗೆ ತಪ್ಪಾಗಿ ಕಾಣುತ್ತಿವೆ. ಅದರಿಂದ ಅಪರಾಧಗಳು ಹೆಚ್ಚುತ್ತಿವೆ ಅಷ್ಟೇ. ಮನುಷ್ಯ ಹೇಗೆ ಭೌತಿಕ ಜಗತ್ತಿನ್ನಲ್ಲಿ ಸಂಸ್ಕಾರವಂತನಾಗಿ, ವಿದ್ಯೆ, ವಿವೇಚನೆಯುಳ್ಳವನಾಗಿರುತ್ತಾನೋ ಅದೇ ವ್ಯಕ್ತಿತ್ವವನ್ನು ವರ್ಚ್ಯುವಲ್ ಜಗತ್ತಿನ್ನಲ್ಲಿ ಪ್ರದರ್ಶಿಸಬೇಕು ಆಗ ಯಾವುದೇ ಪ್ರಮಾದಗಳು ಸಂಭವಿಸುವುದಿಲ್ಲ. ಜನರು ಕೂಡಾ ನವ ಮಾಧ್ಯಮಗಳ ಬಳಕೆ ಮಾಡಿದರೆ ಸಾಲದು ಯಾವ ಸೂಕ್ತ ಮಾರ್ಗದಲ್ಲಿ ಬಳಸಿದರೆ ಸರಿ ಎನ್ನುವ ವಿವೇಚನೆಯ ಜೊತೆಗೆ ನವಮಾಧ್ಯಮಗಳ ಬಳಕೆ ಮಾಡಬೇಕು ಎಂದರು. ನವಮಾಧ್ಯಮಗಳಿಂದ ಮನುಷ್ಯರ ಜೀವನ ಬಹಳ ಸರಳಿಕರಣಗೊಂಡಿದೆ. ಆದರೆ ಹೆಚ್ಚಿನ ಬಳಕೆದಾರರು ನವಮಾಧ್ಯಮಗಳಿಂದಲೇ ಬದುಕನ್ನು ಕ್ಲಿಷ್ಟಕರವಾಗಿಯೂ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾಧ್ಯಮಗಳು ಇಂದು ಸ್ಪರ್ಧೆಗೆ ಇಳಿದಿವೆ. ಇಂದು ನಾವು ಯಾವ ವಾಹಿನಿ ಹಾಕಿದ ಕೂಡಲೇ ನಮ್ಮಲ್ಲೆ ಮೊದಲು ಎನ್ನುವ ಒಕ್ಕಣೆ ಕಣ್ಣಿಗೆ ಬೀಳುತ್ತದೆ. ಇದು ವೀಕ್ಷಕರಿಗೆ ಅನಾವಶ್ಯಕ. ಇಂದು ಮಾಧ್ಯಮಗಳು ಯಾವ ಸುದ್ದಿಗೆ ಮಹತ್ವನೀಡಬೇಕು ಎಂದು ನಿರ್ಧರಿಸುವಲ್ಲಿ ಸೋಲುತ್ತಿವೆ. ಇತ್ತೀಚೆಗೆ ನಡೆದ ಉಧ್ಯಮಿಯೊಬ್ಬರ ಮಗನ ಅದ್ಧೂರಿ ವಿವಾಹವನ್ನು ವಾರಗಟ್ಟಲೇ ವಾಹಿನಿಗಳು ಪ್ರಸಾರ ಮಾಡಿದವು. ಇದರಿಂದ ಯಾರಿಗೆ ಏನು ಉಪಯೋಗವಾಯಿತು. ಅದಾಗಿ ಸ್ವಲ್ಪ ದಿನಕ್ಕೆ ಭಾರತದ ಒಬ್ಬ ಖ್ಯಾತ ಉಧ್ಯಮಿ ಈ ದೇಶದ ಅನೇಕ ಮಂದಿಗೆ ಉಧ್ಯೋಗ ನೀಡಿದವರು, ಭಾರತದ ಕೀರ್ತಿಯನ್ನು ಹೆಚ್ಚಿಸಿದಂತವರು ವಿಧಿವಶರಾದರು. ಅವರ ಬಗ್ಗೆ ಒಂದು ದಿನದ ಸುದ್ದಿಯಲ್ಲಿ ಸ್ವಲ್ಪ ಹೇಳಿ ನಿಲ್ಲಿಸಿಬಿಟ್ಟರು. ಆದರೆ ಖಂಡಿತವಾಗಿ ಸತ್ತ ಬಳಿಕವೂ ಆದರ್ಶವಾಗುಳಿದ ಉಧ್ಯಮಿ ಕಥೆಯನ್ನು ಮಾಧ್ಯಮಗಳು ಪ್ರಸಾರ ಮಾಡಬೇಕಿತ್ತು. ಆ ಮೂಲಕ ಜನರಿಗೆ ಸ್ಪೂರ್ತಿಯನ್ನು ತುಂಬಬಹುದಾಗಿತ್ತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಂ.ಎಸ್ ವಸತಿ ಶಾಲೆಯ ವಿದ್ಯಾರ್ಥಿಗಳು ನಿರೂಪಣೆ, ಸ್ವಾಗತ, ಪರಿಚಯವನ್ನು ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.











