ಮಡಿಕೇರಿ ಡಿ.3 NEWS DESK : ನೆರೆಯ ಬಾಂಗ್ಲಾ ದೇಶದಲ್ಲಿರುವ ಮತಾಂಧ ಸರ್ಕಾರ, ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೊಡಗು ಜಿಲ್ಲಾ ಹಿಂದು ಹಿತರಕ್ಷಣಾ ಸಮಿತಿಯಿಂದ ಡಿ.5 ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಜಾಗೃತಿ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಪ್ರಮುಖ ಕುಕ್ಕೇರ ಅಜಿತ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 10.30 ಗಂಟೆಗೆ ನಗರದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ನಂತರ ಗಾಂಧಿ ಮೈದಾನದಲ್ಲಿ ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ ಎಂದರು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದು ಸಮುದಾಯದ ಮೇಲಿನ ಅಮಾನವೀಯ ದೌರ್ಜನ್ಯ ಪ್ರಕರಣಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿದೆ. ಹೋರಾಟದ ಮೂಲಕ ನೆರೆಯ ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಹಿಂದು ಸಮುದಾಯಕ್ಕೆ ನಾವು ನಿಮ್ಮೊಂದಿಗೆ ಇದ್ದೇವೆ ಎನ್ನುವ ಸಂದೇಶವನ್ನು ನೀಡಲಾಗುತ್ತಿದೆ. ಹಿಂದುಗಳ ಮೇಲೆ ನಡೆಯುತ್ತಿರುವ ಅಮಾನವೀಯ ಕೃತ್ಯವನ್ನು ‘ವಿಶ್ವಸಂಸ್ಥೆ’ ಗಮನಿಸಬೇಕು ಮತ್ತು ಸಂಕಷ್ಟಕ್ಕೆ ಪರಿಹಾರ ನೀಡಬೇಕೆನ್ನುವುದು ನಮ್ಮ ಹೋರಾಟದ ಮೂಲ ಉದ್ದೇಶವಾಗಿದೆಯೆಂದು ಸ್ಪಷ್ಟಪಡಿಸಿದರು. ಬಾಂಗ್ಲಾದಲ್ಲಿ ಮೀಸಲಾತಿಯ ವಿಚಾರದ ಹಿನ್ನೆಲೆ ಆರಂಭಗೊಂಡ ದಂಗೆಯು ಹಿಂಸಾತ್ಮಕ ಸ್ವರೂಪವನ್ನು ಪಡೆದು ಮತಾಂಧ ಶಕ್ತಿಗಳು ತಮಗೆ ಅನುಕೂಲಕರವಾದ ಸರ್ಕಾರವನ್ನು ಸ್ಥಾಪಿಸಿವೆ. ವಿನಾಕಾರಣ ಹಿಂದೂ ಸಮುದಾಯದ ಮೇಲೆ ಹಲ್ಲೆ, ಮಹಿಳೆಯರ ಮೇಲೆ ಅತ್ಯಾಚಾರ, ಹಿಂದು ದೇಗುಲಗಳನ್ನು ಧ್ವಂಸಗೊಳಿಸುವ ಘಟನೆಗಳು ನಡೆಯುತ್ತಿದೆ. ಇಸ್ಕಾನ್ ಸಂಸ್ಥೆಯ ಪ್ರಮುಖರನ್ನು ಬಂಧಿಸಿರುವುದಲ್ಲದೆ, ಅವರನ್ನು ನೋಡಲು ತೆರಳಿದವರನ್ನು ಕೂಡ ಬಂಧನಕ್ಕೆ ಒಳಪಡಿಸಿದ್ದು, ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ನೆರೆಯ ಬಾಂಗ್ಲಾದಲ್ಲಿನ ಹಿಂದು ಸಮುದಾಯದ ಮೇಲಿನ ದೌರ್ಜನ್ಯಗಳ ತಡೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ವಿಶ್ವ ಸಂಸ್ಥೆ ಸಮಸ್ಯೆಯನ್ನು ಬಗೆಹರಿಸಲು ಪ್ರಮುಖ ಪಾತ್ರ ವಹಿಸಬೇಕೆಂದು ಪ್ರತಿಭಟನೆಯ ಸಂದರ್ಭ ಆಗ್ರಹಿಸುವುದಾಗಿ ಕುಕ್ಕೇರ ಅಜಿತ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಿಂದು ಹಿತರಕ್ಷಣಾ ಸಮಿತಿಯ ಸಂಚಾಲಕ ಸುರೇಶ್ ಮುತ್ತಪ್ಪ, ಪದಾಧಿಕಾರಿಗಳಾದ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ ಹಾಗೂ ಸಂಪತ್ ಕುಮಾರ್ ಉಪಸ್ಥಿತರಿದ್ದರು.











