ಚೆಟ್ಟಳ್ಳಿ ಡಿ.18 NEWS DESK : ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಸಂಭ್ರಮದ ಪುತ್ತರಿ ನಮ್ಮೆರ ಊರೊರ್ಮೆ ಕೂಟ ನಡೆಯಿತು. ತಳಿಯತಕ್ಕಿದೀಪ ಹಿಡಿದ ಮಹಿಳೆಯರು, ದುಡಿಕೊಟ್ಟ್ ಹಾಡಿನೊಂದಿಗೆ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಕುತ್ತಿಹಿಡಿದು ಸಾಂಪ್ರದಾಯಿಕವಾಗಿ ಸಭಾಂಗಣಕ್ಕೆ ಬರುವಾಗ ಮುಳ್ಳಂಡ ಪ್ರೇಮಾ ಅಯ್ಯಪ್ಪ ಅಕ್ಕಿಹಾಕಿ ಸ್ವಾಗತಿಸಿದರು. ಸಮಾಜದ ಉಪಾದ್ಯಕ್ಷರು ಹಾಗೂ ಹಿರಿಯರಾದ ಬಿದ್ದಂಡ ಮಾದಯ್ಯ, ರಾಧಮಾದಯ್ಯ ದಂಪತಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾಜದ ನಿದೇರ್ಶಕಿ ಮುಳ್ಳಂಡ ಮಾಯಮ್ಮ ತಮ್ಮಯ್ಯ ಪ್ರಾರ್ಥಿಸಿದರು. ಜೋಮಾಲೆ ಪೊಮ್ಮಕ್ಕಡ ಕೂಟದಿಂದ ಉಮ್ಮತಾಟ್, ಕೋಲಾಟ್ ಹಾಗೂ ವಾಲಗತಾಟ್ ಪ್ರದರ್ಶನ, ಕೊಡವ ಹಾಡುಗಾರಿಕೆ ನಡೆಯಿತು. ಪುರುಷರಿಗೆ ಹಾಗೂ ಮಹಿಳೆಯರಿಗೆ ಒಳಂಗಣ ಕ್ರೀಡೆ ನಡೆಯಿತು. ಮಧ್ಯಾಹ್ನ ಕಾರ್ಯಕ್ರಮ ಅಂಗವಾಗಿ ಊರಿನ ಹಿರಿಯರು ಹಾಗೂ ವಾಯುಪಡೆಯ ನಿವೃತ್ತ ಸೇನಾನಿ ಪುತ್ತರಿರ ಗಣೇಶ್ ಭೀಮಯ್ಯ ಗುರುಕಾರೋಣರಿಗೆ ಮೀದಿನೀರಿಟ್ಟು ಎಲ್ಲರಿಗೂ ಒಳಿತನ್ನು ಮಾಡಲೆಂದು ಪ್ರಾರ್ಥಿಸಿದರು. ಊರೊರ್ಮೆ ಕೂಟದ ಅಂಗವಾಗಿ ತಂಬಿಟ್ಟು ಹಾಗೂ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು. ಮಹಿಳೆಯರು ಗದ್ದೆಯಿಂದ ತಂದ ಭತ್ತವನ್ನು ಮರದ ವನಕೆಯಿಂದ ಕುಟ್ಟಿ ಶುದ್ದಗೊಳಿಸುವಾಗ ಭತ್ತ ಕುಟ್ಟೋಣ ಬನ್ನಿ.. ಎಂಬ ಹಾಡಿನ ಮೂಲಕ ಪುರಾತನ ಆಚರಣೆಯನ್ನು ಅನಾವರಣಗೊಳಿಸಿದಲ್ಲದೆ ಕುಟ್ಟಿಪುಡಿ ಮಾಡಿದ ಪುಡಿಯಲ್ಲಿ ಕಾಫಿ ತಯಾರಿಸಿ ಎಲ್ಲರಿಗೂ ನೀಡಿದ್ದು ವಿಶೇಷವಾಗಿತ್ತು.
ಸಭಾಕಾರ್ಯಕ್ರಮ :: ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಕೊಡವ ಜನಾಂಗದ ಮೂಲನೆಲೆಯಾದ ಐನ್‍ಮನೆಗಳಲ್ಲಿ ನಮ್ಮ ಮೂಲ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ, ಪರಂಪರೆಗಳು ಉಳಿಯುವಂತಾಗಬೇಕು. ಆದರೆ ಕೊಡವ ಸಮಾಜಗಳ ಮೂಲಕ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸುತ್ತಿದ್ದು ಚೆಟ್ಟಳ್ಳಿ ಕೊಡವ ಸಮಾಜದ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಬೇಕೆಂದರು. ಈ ಸಂದರ್ಭ ಹಿರಿಯ ಸದಸ್ಯೆ ಐಚೆಟ್ಟೀರ ಚೋಂದಮ್ಮ, ಉಪಾದ್ಯಕ್ಷ ಬಿದ್ದಂಡ ಮಾದಯ್ಯ, ಖಜಾಂಜಿ ಕೆಚೆಟ್ಟೀರ ರತಿಕಾರ್ಯಪ್ಪ, ಕಾರ್ಯದರ್ಶಿ ಪುತ್ತರಿರ ಕರುಣ್‍ಕಾಳಯ್ಯ ಉಪಸ್ಥಿತಿರಿದ್ದರು. ನಿರ್ದೇಶಕ ಬಟ್ಟೀರ ರಕ್ಷುಕಾಳಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ವಿಜೇತರಿಗೆ ಹಾಗೂ ಉಮ್ಮತಾಟ್, ಕೋಲಾಟ್ ಪ್ರದರ್ಶನ ನೀಡಿದ ಮಹಿಳಾ ತಂಡಕ್ಕೆ ಬಹುಮಾನ ನೀಡಲಾಯಿತು.