ಸೋಮವಾರಪೇಟೆ ಜ.7 NEWS DESK : ಗೌಡಳ್ಳಿ ಗ್ರಾಮ ಪಂಚಾಯಿತಿ, ಸಿ.ಎಂ.ಸಿ.ಎ ಹಾಗೂ ನಾವು ಪ್ರತಿಷ್ಠಾನ ಸಂಸ್ಥೆಯ ಸಹಯೋಗದಲ್ಲಿ ಗೌಡಳ್ಳಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಮಕ್ಕಳು ಮತ್ತು ಮಹಿಳೆಯರ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟರು. ಶುಂಠಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪ್ರೇಮ್ ಕುಮಾರ್ ಮಾತನಾಡಿ, ಮೇಲ್ಚಾಚವಣಿಯ ಮರಗಳು ಗೆದ್ದಲು ಹಿಡಿದಿದ್ದು, ತರಗತಿಯಲ್ಲಿ ಕುಳಿತುಕೊಳ್ಳುವುದಕ್ಕೆ ಭಯವಾಗುತ್ತದೆ. ಮೈದಾನದಲ್ಲಿ ಕಾಡು ಬೆಳೆದಿರುವುದರಿಂದ ಕೆಲವೊಮ್ಮೆ ಹಾವುಗಳ ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ. ನಂದಿಗುಂದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಜಿ.ಎಸ್.ಧ್ರುವ, ಕಾರ್ತಿಕ್, ಮೋಕ್ಷ ತಮ್ಮ ಶಾಲೆಯ ಸಮಸ್ಯೆಗಳನ್ನು ಬಿಚ್ಚಿಟ್ಟರು. ಶೌಚಾಗೃಹಕ್ಕೆ ಬಾಗಿಲು ಇಲ್ಲ. ಹೊಸ ಶೌಚಗೃಹ ಬೇಕು. ಕ್ರೀಡಾಸಾಮಾಗ್ರಿಗಳು ಬೇಕು. ಕೊಠಡಿಗೆ ಗಾರೆ ಹಾಕಿಸಿಕೊಡಿ ಎಂದು ಮನವಿ ಮಾಡಿದರು. ಗೌಡಳ್ಳಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಲೋಕೇಶ್, ಮನ್ವಿತ್, ವಿದ್ಯಾ, ಪ್ರಿಯಾಂಕ, ಪ್ರಜ್ವಲ್, ಶ್ರಾಧ್ಯ ಮಾತನಾಡಿ, ಶಾಲಾ ಮೈದಾನ ಒತ್ತುವರಿಯಾಗುತ್ತಿದೆ. ಟ್ರಂಚ್ ನಿರ್ಮಿಸಿ ಹದ್ದು ಬಸ್ತು ಗುರುತಿಸಿ ಮೈದಾನವನ್ನು ಉಳಿಸಿಕೊಳ್ಳಬೇಕು. ಶೌಚಗೃಹಕ್ಕೆ ಸಿಬ್ಬಂದಿ ಬೇಕು. ಸಂಜೆ ಶಾಲಾ ಆವರಣದಲ್ಲಿ ಕಿಡಿಗೇಡಿಗಳು ಓಡಾಡಿಕೊಂಡಿರುತ್ತಾರೆ. ಸಿ.ಸಿ.ಕ್ಯಾಮೆರಾ ಅಳವಡಿಸಿಕೊಡಬೇಕು. ಸ್ಮಾರ್ಟ್ ಕ್ಲಾಸ್‍ಗಳು ಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತವಾಗಿ ಸೈಕಲ್ ಕೊಡಬೇಕು ಎಂದು ಮನವಿ ಮಾಡಿದರು. 9ನೇ ತರಗತಿ ವಿದ್ಯಾರ್ಥಿನಿ ಕಳೆದ ಮೂರು ವರ್ಷಗಳಿಂದ ಶುಚಿ ಪ್ಯಾಡ್ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಮಾತನಾಡಿ, ಕಟ್ಟಡ ದುರಸ್ತಿ, ಕುಡಿಯುವ ನೀರು, ಶೌಚಗೃಹ, ಕಾಂಪೌಂಡ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಅವರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯು ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ.35ರಷ್ಟು ಮಕ್ಕಳಿದ್ದಾರೆ. ಗ್ರಾಮೀಣ ಜನಸಂಖ್ಯೆಯಲ್ಲಿ ಶೇ.45ರಷ್ಟು ಮಕ್ಕಳಿದ್ದಾರೆ. ಈ ಮಕ್ಕಳಿಗೆ ಶೇ.2ರಷ್ಟು ಅನುದಾನ ನೀಡಿದರೆ ಮಕ್ಕಳಿಗೆ ಮೂಲಭೂತ ಸೌಕರ್ಯ ತಲುಪಿಸಲು ಸಾಧ್ಯವಾಗುವುದಿಲ್ಲ. ಜನನವಾದ 1000 ಮಕ್ಕಳಲ್ಲಿ ಒಂದು ವರ್ಷ ತುಂಬುದರೊಳಗೆ 25 ಮಕ್ಕಳು ಸಾಯುತ್ತಿದ್ದಾರೆ. 15ರಿಂದ 49 ವರ್ಷದೊಳಗಿನ ಮಹಿಳೆಯರಲ್ಲಿ ಶೇ 49ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಪೌಷ್ಠಿಕಾಂಶ ಕೊರತೆ ಮತ್ತು ಮಾನಸಿಕ ಅರೋಗ್ಯ ಸಮಸ್ಯೆಯಿಂದ ರಕ್ತಹೀನತೆಗೆ ಕಾರಣ ಎಂದು ತಿಳಿದುಬಂದಿರುವ ಸತ್ಯವಾಗಿದೆ. ಮಕ್ಕಳ ರಕ್ಷಣೆಗೆ ಇಡೀ ಸಮಾಜ ಕೈಜೋಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಜಿ.ಎಸ್.ನಾಗರಾಜು, ಉಪಾಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ರೋಹಿಣಿ, ಸುಮಾ, ವೆಂಕಟೇಶ್, ಮಂಜುನಾಥ್, ಗಣೇಶ್, ಪಿಡಿಒ ಲಿಖಿತಾ, ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಇದ್ದರು.