ಪೊನ್ನಂಪೇಟೆ ಜ.7 NEWS DESK : ಮಸೀದಿ ಕೇವಲ ಆರಾಧನೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಾಗಿ ಸಮುದಾಯದ ಉನ್ನತಿಗೆ ಮಾರ್ಗದರ್ಶನ ನೀಡುವ ಸ್ಥಳವೂ ಆಗಿದೆ. ಮಸೀದಿಗಳು ಸಮಾಜದ ಪ್ರತೀ ವ್ಯಕ್ತಿಯ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸುವ ಕೇಂದ್ರವಾಗಿರಬೇಕು ಎಂಬುವುದು ಇಸ್ಲಾಂ ಧರ್ಮದ ಮೂಲ ಆಶಯವಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷರು, ಪ್ರಸಿದ್ಧ ವಿದ್ವಾಂಸರಾದ ಸೈಯದ್ ಜಿಫ್ರಿ ಮುತ್ತುಕೋಯ ತಂಗಳ್ ಹೇಳಿದರು. ಪೊನ್ನಂಪೇಟೆ ತ್ಯಾಗರಾಜ ರಸ್ತೆಯಲ್ಲಿ ಆಧುನಿಕ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯ ಮಸೀದಿಯಾಗಿ ಪುನರ್ ನಿರ್ಮಾಣಗೊಂಡಿರುವ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಸೀದಿ ಎಂಬುದು ಜಾತಿ, ಧರ್ಮ, ಪಂಥವನ್ನು ಮೀರಿ ಮನುಷ್ಯ ಪ್ರೀತಿಯ ಸೌಹಾರ್ದಯುತ ಜೀವನ ನಡೆಸುತ್ತಾ ಆ ಮೂಲಕ ಶಾಂತಿ, ಸಹೋದರತೆಯ ಸಮಾಜ ನಿರ್ಮಾಣದ ಕುರಿತು ಕಲಿಸುವ ಪಾಠ ಶಾಲೆಯಾಗಬೇಕು ಎಂದು ಕಳೆದ 1400 ವರ್ಷಗಳ ಹಿಂದೆಯೇ ವಿಶ್ವ ಪ್ರವಾದಿ ಮೊಹಮ್ಮದ್ ಪೈಗಂಬರ್ ಬೋಧಿಸಿದ್ದಾರೆ ಎಂದು ಒತ್ತಿ ಹೇಳಿದರು. ಸೌಹಾರ್ದತೆ, ದಯೆ, ಒಗ್ಗಟ್ಟು, ಪ್ರೀತಿ, ಬದ್ಧತೆ ಇಸ್ಲಾಂ ಧರ್ಮದ ಆಶಯಗಳಾಗಿವೆ. ವಿಶ್ವಪ್ರವಾದಿ ಮುಹಮ್ಮದ್ (ಸ.ಅ) ಅವರು ಜಗತ್ತಿಗೆ ಶಾಂತಿ, ಸೌಹಾರ್ದತೆ, ಮಾನವೀಯತೆಯ ಸಂದೇಶವನ್ನು ಸಾರಿದ ದೂರದೃಷ್ಟಿ ಹೊಂದಿದ್ದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ವಿವರಿಸಿದ ಸೈಯದ್ ಜಿಫ್ರಿ ಮುತ್ತುಕೋಯ ತಂಗಳ್, ಪ್ರವಾದಿ ಮಹಮದ್ ಪೈಗಂಬರ್ ಅವರು ಕ್ರಿ.ಪೂ.571ರಲ್ಲಿ ಪ್ರಪಂಚದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾರಿದ ಶಾಂತಿಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಪ್ರವಾದಿಯವರು ಬೋಧಿಸಿದ ಪರಿಹಾರ ಸೂತ್ರಗಳು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮೀತವಲ್ಲ. ಇಡೀ ಮನುಕುಲಕ್ಕೆ ಸೇರಿದ್ದು. ಅಂದು ಅವರು ಬೋಧಿಸಿದ ಪರಿಹಾರ ಸೂತ್ರಗಳನ್ನು ಇಂದು ನಾವೆಲ್ಲರೂ ಪಾಲಿಸುವ ಮೂಲಕ ಸಹೋದರರಂತೆ ಬಾಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಮಸೀದಿ ನಿರ್ಮಾಣ ಕಾರ್ಯಕ್ಕೆ ಧರ್ಮಭೇದ ಲೆಕ್ಕಿಸದೆ ಸಾಕಷ್ಟು ಸ್ಥಳೀಯರು ಸಹಕಾರ ನೀಡಿದ್ದಾರೆ. ಬೇರೆ ಬೇರೆ ಭಾಗದ ಅನ್ಯ ಧರ್ಮದವರು ಆರ್ಥಿಕ ಸಹಾಯದ ರೂಪದಲ್ಲಿ ಮತ್ತು ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ವಸ್ತುಗಳ ರೂಪದಲ್ಲಿ ಸಹಕಾರ ನೀಡಿ ಭಾತೃತ್ವ ಮೆರೆದಿರುವುದು ಇಲ್ಲಿಯ ವಿಶೇಷವಾಗಿದೆ. ನೂತನ ಮಸೀದಿಯ ಉದ್ಘಾಟನೆಯ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಿಗೆ ಬರುವ ಜನರ ವಾಹನಗಳನ್ನು ನಿಲುಗಡೆಗೊಳಿಸಲು ಸ್ಥಳೀಯ ಬಹಳಷ್ಟು ಅನ್ಯಧರ್ಮಿಯರು ತಮ್ಮ ಜಾಗವನ್ನು ಒದಗಿಸಿ ಸಹೋದರತ್ವ ಎತ್ತಿ ಹಿಡಿದಿದ್ದಾರೆ ಎಂದು ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪಿ.ಎ. ಅಸೀಸ್ ಕಾರ್ಯಕ್ರಮದಲ್ಲಿ ಹೇಳಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಮತ್ತು ಕೊಡಗಿನ ನಾಹಿಬ್ ಖಾಝಿ ಎಡಪಾಲದ ಅಬ್ದುಲ್ಲಾ ಪೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಎಸ್. ಕೆ. ಜೆ. ಎಂ. ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮುಸ್ಲಿಯರ್ ಮಾತನಾಡಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಎಸ್.ಕೆ.ಜೆ.ಎಂ. ಕಾರ್ಯದರ್ಶಿ ಆರಿಫ್ ಪೈಝಿ, ಕೊಡಗು ಜಿಲ್ಲಾ ಎಸ್. ವೈ.ಎಸ್. ಕಾರ್ಯದರ್ಶಿ ಅಶ್ರಫ್ ಪೈಝಿ, ಎಸ್. ಕೆ. ಎಸ್. ಎಸ್. ಎಫ್. ನ ಪ್ರಮುಖರಾದ ಉಮ್ಮರ್ ಫೈಝಿ, ಹಿರಿಯರಾದ ಎರಮು ಹಾಜಿ, ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಸಿ.ಎಂ. ಅಶ್ರಫ್, ಕೋಶಾಧಿಕಾರಿ ಮೊಹಮ್ಮದ್ ಹಾಜಿ ಮತ್ತಿತರ ಪ್ರಮುಖರು ಹಾಜರಿದ್ದರು. ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಅಹಮದ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ನಿರ್ಮಾಣ ಕಾರ್ಯ ನಿರ್ವಹಿಸಿದ ಗುತ್ತಿಗೆದಾರರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪಿ.ಎ.ಅಸೀಸ್ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬರಾದ ಜಿಯಾದ್ ದಾರಿಮಿ ಪ್ರಾರ್ಥಿಸಿದರು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ಸಿ.ಎ.ಜುನೈದ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಕೆ.ಎಂ.ಅಬು ವಂದಿಸಿದರು. ಸುಮಾರು ಎರಡು ಶತಮಾನಗಳಷ್ಟು ಹಳೆಯ ಪೊನ್ನಂಪೇಟೆ ಶಾಫಿ ಜುಮಾ ಮಸೀದಿ ಇದೀಗ ಆಧುನಿಕ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯ ಮಿನಾರ್ ರಹಿತ ವಿಭಿನ್ನ ಆರಾಧನಾಲಯವಾಗಿ ಪುನರ್ ನಿರ್ಮಾಣಗೊಂಡಿದ್ದು, ಪೊನ್ನಂಪೇಟೆ ವ್ಯಾಪ್ತಿಯಲ್ಲೇ ಸುವಿಶಾಲವಾದ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಮಸೀದಿಯು ನೆಲ ಮತ್ತು ಪ್ರಥಮ ಅಂತಸ್ತುಗಳನ್ನು ಹೊಂದಿದೆ. ನೂತನ ಮಸೀದಿಯ ನೆಲ ಮತ್ತು ಪ್ರಥಮ ಅಂತಸ್ತು ತಲಾ 4300 ಚ.ಅ. ವಿಸ್ತೀರ್ಣ ಹೊಂದಿದ್ದು, ಒಟ್ಟು 8,600 ಚ.ಅ. ಅಗಲದ ಈ ಮಸೀದಿಯನ್ನು 600 ಮಂದಿ ಏಕಕಾಲದಲ್ಲಿ ನಮಾಜು ಮಾಡಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ನೆಲ್ಯಹುದಿಕೇರಿಯ ಇಂಜಿನಿಯರ್ ಮೊಹಿಮೀನ್ ಈ ಮಸೀದಿಯ ನೀಲನಕಾಶೆ ತಯಾರಿಸಿದರೆ, ನೆಲ್ಯಹುದಿಕೇರಿಯ ಸಿವಿಲ್ ಗುತ್ತಿಗೆದಾರರಾದ ಅಶ್ರಫ್ (ಕುಂಜ್ಹನ್) ಮಸೀದಿ ನಿರ್ಮಾಣದ ಕೆಲಸ ನಿರ್ವಹಿಸಿದ್ದಾರೆ. ನೆಲ ಅಂತಸ್ತಿನ ಒಳಾಂಗಣದಲ್ಲಿ ಮಾಡಲಾದ ಮರದ ವಿನ್ಯಾಸ ಕೆಲಸ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಧರ್ಮ ಗುರುಗಳು ವಿವಿಧ ಬೋಧನೆ ನಡೆಸುವ ಭಾಷಣ ಪೀಠವನ್ನು ಮತ್ತು ನಮಾಜ್, ಪ್ರಾರ್ಥನೆಗಳಿಗೆ ಪವಿತ್ರ ಮಕ್ಕಾದ ದಿಕ್ಕನ್ನು ಸೂಚಿಸುವ ಮಿಹರಾಬ್ ಅನ್ನು ಪೂರ್ಣವಾಗಿ ಮರದಿಂದಲೇ ವಿನ್ಯಾಸಗೊಳಿಸಲಾಗಿದೆ. 2020ರಿಂದ ಆರಂಭಗೊಂಡ ಈ ಮಸೀದಿಯ ನಿರ್ಮಾಣ ಕಾರ್ಯ ಕಳೆದ 44 ತಿಂಗಳುಗಳಿಂದ ನಿರಂತರವಾಗಿ ನಡೆದಿತ್ತು. ಮಸೀದಿಯ ಉದ್ಘಾಟನೆಯ ಅಂಗವಾಗಿ ರಾತ್ರಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಸರಾಂತ ಧರ್ಮಗುರು ಯಾಹ್ಯ ಬಾಖವಿ ಪ್ರಧಾನ ಭಾಷಣ ಮಾಡಿದರು.