ಮಡಿಕೇರಿ NEWS DESK ಜ.7 : ಶ್ರೀ ಮಹಾಮೃತ್ಯುಂಜಯ ದೇವಸ್ಥಾನ ಎಂದು ಮರು ನಾಮಕರಣಗೊಂಡಿರುವ ಕಟ್ಟೆಮಾಡು ಗ್ರಾಮದ ಪುರಾತನ ಮಹಾದೇವ ದೇವಸ್ಥಾನವನ್ನು ಸರಕಾರ ತನ್ನ ಅಧೀನಕ್ಕೆ ಒಳಪಡಿಸಿಕೊಳ್ಳಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೆಲವರು ದೇವಾಲಯದ ಮೇಲೆ ಹಿಡಿತ ಸಾಧಿಸಿದ್ದು, ಆದಿಮಸಂಜಾತ ಕೊಡವರನ್ನು ಕಡೆಗಣಿಸಿದ್ದಾರೆ. ಕುಪ್ಯಚೇಲೆ ಧರಿಸಿ ದೇವಾಲಯಕ್ಕೆ ಹೋದವರನ್ನು ತಡೆದು ಅವಮಾನಿಸಲಾಗಿದೆ. ಇದು ಸಂವಿಧಾನ ವಿರೋಧಿ ಧೋರಣೆಯಾಗಿದೆ ಎಂದು ಆರೋಪಿಸಿದ್ದಾರೆ. ಬೈಲಾ ತಿದ್ದುಪಡಿ ಮಾಡುವಂತೆ ಸೂಚನೆ ಇದ್ದರೂ ಡ್ರೆಸ್ ಕೋಡ್ ಹೇರಲಾಗುತ್ತಿದೆ. ಸಮಿತಿ ಸಂವಿಧಾನ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿರುವುದರಿಂದ ಸರಕಾರ ದೇವಾಲಯದ ಮೇಲೆ ಹಿಡಿತ ಸಾಧಿಸಬೇಕು ಮತ್ತು ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಮುಜರಾಯಿ ಸಚಿವರಿಗೂ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಕೊಡವ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ಮತ್ತು ಆದಿಮಸಂಜಾತ ಕೊಡವ ಜನಾಂಗದ ಹಕ್ಕುಗಳಿಗಾಗಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸ್ವಯಂ ನಿರ್ಣಯದ ಬೇಡಿಕೆಯನ್ನು ಮುಂದಿಟ್ಟುಕೊoಡು ಸಿಎನ್‌ಸಿ ಸಂಘಟನೆ ಜನಜಾಗೃತಿಯ ಹೋರಾಟವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಎನ್.ಯು.ನಾಚಪ್ಪ ಹೇಳಿದ್ದಾರೆ.