ಮಡಿಕೇರಿ ಜ.7 NEWS DESK : ಅಖಿಲ ಭಾರತ ಟೆಕ್ವಾಂಡೊ ಅಸೋಸಿಯೇಷನ್ ವತಿಯಿಂದ ನಡೆದ 27ನೇ ಎಐಟಿಎ ರಾಷ್ಟ್ರೀಯ ಐಟಿಎಫ್ ಟೆಕ್ವಾಂಡೊ ಚಾಂಪಿಯನ್ ಶಿಪ್ ನಲ್ಲಿ ಬಲಂಬೇರಿ ಗ್ರಾಮದ ಬೊಳ್ತಂಡ ಸಿ.ಜಸ್ಮಿತಾ ಚಿನ್ನ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದಾಳೆ. ನವದೆಹಲಿಯ ರಾಜ್‌ಘಾಟ್‌ನ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ನಡೆದ 14ರ ಒಳಗಿನ ವಯೋಮಿತಿಯ ಬಾಲಕಿಯರ ವಿಭಾಗದ ಸ್ಪರಿಂಗ್ ವಿಭಾಗದಲ್ಲಿ ಪ್ರಥಮ ಹಾಗೂ ಸೆಲ್ಫ್‌ಡಿಫೆನ್ಸ್ ವಿಭಾಗದಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದಾಳೆ. ಬೊಳ್ತಂಡ ಸಿ.ಜಸ್ಮಿತಾ ಬೆಂಗಳೂರಿನಲ್ಲಿ ನೆಲೆಸಿದ್ದು, ಮೂಲತಃ ಮೂರ್ನಾಡು ಸಮೀಪದ ಬಲಂಬೇರಿ ಗ್ರಾಮದ ಬೊಳ್ತಂಡ ಚಂಗಪ್ಪ ಹಾಗೂ ನಮಿತಾ (ತಾಮನೆ-ಗಿಜಿಗಂಡ) ದಂಪತಿ ಪುತ್ರಿ. ಬೆಂಗಳೂರಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಒಂದುವರೆ ವರ್ಷದಿಂದ ತರಬೇತುದಾರರಾದ ಗಂಗಾಧರ್ ಹಾಗೂ ಅನಿಲ್ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾಳೆ.