ಸೋಮವಾರಪೇಟೆ ಜ.9 NEWS DESK : ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಗೊಂದಲಗಳು ಮುಂದುವರೆದಿದ್ದು, ಪ.ಪಂ.ನ ಕೆಲವೊಂದು ತಪ್ಪು ಹೆಜ್ಜೆಗಳಿಂದಾಗಿ ದಿನಕ್ಕೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಪಟ್ಟಣ ಪಂಚಾಯಿತಿಯ ಮಳಿಗೆಗಳ ಹರಾಜು ಎಂಬುದು ಮಧ್ಯವರ್ತಿಗಳಿಗೆ ಹಬ್ಬದೂಟದಂತಾಗಿದೆ ಎಂಬುದು ಈಗಿರುವ ವರ್ತಕರ ಆರೋಪವಾಗಿದ್ದು, ಸೆಟಲ್‍ಮೆಂಟ್‍ಗೆಂದೇ ಇರುವ ಕೆಲವರಿಂದಾಗಿ ಬಡ ವರ್ತಕರು ಅತಂತ್ರರಾಗಿದ್ದಾರೆ. ಹಣವಂತರು ಇಂತಹ ಮಧ್ಯವರ್ತಿಗಳಿಗೆ ಲಕ್ಷಗಟ್ಟಲೆ ಹಣ ನೀಡಿ ಅಂಗಡಿಯನ್ನು ಉಳಿಸಿಕೊಂಡಿದ್ದಾರೆ. ಬಡ ವರ್ತಕರು ಬೀದಿಗೆ ಬೀಳುವ ಸನ್ನಿವೇಶ ಸೃಷ್ಟಿಯಾಗಿದೆ ಎಂಬುದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಯೂ ಪ್ರತಿಧ್ವನಿಸಿತ್ತು. ಇವೆಲ್ಲದರ ನಡುವೆ ಟೆಂಡರ್ ಪ್ರಕ್ರಿಯೆ ಅನುಷ್ಠಾನಕ್ಕೆ ಹೈಕೋರ್ಟ್ ಮತ್ತೆ ತಡೆ ನೀಡಿದೆ. ಪಟ್ಟಣದ ವರ್ತಕರಿಬ್ಬರು ಪ.ಪಂ. ಮಳಿಗೆ ಹರಾಜಿನಲ್ಲಿ ಹಲವಷ್ಟು ಲೋಪದೊಷಗಳಿದ್ದು, ಟೆಂಡರ್‍ನಲ್ಲಿ ಅಕ್ರಮ ನಡೆದಿದೆ. ನಿಯಮಾವಳಿಯ ಪ್ರಕಾರ ಪ್ರಕ್ರಿಯೆ ನಡೆಸದೇ ಇರುವುದರಿಂದ ನಮಗೆ ಅನ್ಯಾಯವಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು, ಪಟ್ಟಣ ಪಂಚಾಯಿತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದು, ಕಳೆದ 13.12.2024ರಂದು ಪಟ್ಟಣ ಪಂಚಾಯಿತಿ ತೆಗೆದುಕೊಂಡ ನಿರ್ಣಯದ ಅನುಷ್ಠಾನಕ್ಕೆ ಇದೀಗ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಕಳೆದ ಅಕ್ಟೋಬರ್‍ನಲ್ಲಿ ನಡೆದ ಇಲ್ಲಿನ ಪಟ್ಟಣ ಪಂಚಾಯಿತಿಗೆ ಒಳಪಡುವ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ, ಮಧ್ಯವರ್ತಿಗಳು ಡೀಲ್ ಮಾಡಿಕೊಳ್ಳುವ ಮೂಲಕ ಇಡೀ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ. ಈಗಾಗಲೇ ನಡೆದಿರುವ ಟೆಂಡರ್ ರದ್ದುಪಡಿಸಿ, ಮತ್ತೊಮ್ಮೆ ಇ-ಟೆಂಡರ್ ಮಾಡಬೇಕೆಂದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಸದಸ್ಯರುಗಳು, ಟೆಂಡರ್ ನಲ್ಲಿ ಅಕ್ರಮ ನಡೆದಿರುವ ಬಗ್ಗೆ ದೀರ್ಘ ಚರ್ಚೆ ನಡೆಸಿ, ಅಂತಿಮವಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮತ್ತೊಮ್ಮೆ ಇ-ಟೆಂಡರ್ ನಡೆಸುವಂತೆ ಗಮನ ಸೆಳೆಯಲು ತೀರ್ಮಾನಿಸಿದ್ದರು. ಪಂಚಾಯಿತಿ ಮಳಿಗೆಗಳಿಗೆ ಟೆಂಡರ್ ಹಾಕಿದವರ ಹೆಸರು, ಮಳಿಗೆಯ ಸಂಖ್ಯೆಗಳು, ಮೊಬೈಲ್ ನಂಬರ್‍ಗಳು ಪಂಚಾಯಿತಿಯ ಸಿಬ್ಬಂದಿಗಳಿಂದಲೇ ಮಧ್ಯವರ್ತಿಗಳ ಕೈಸೇರಿವೆ. ಪಂಚಾಯಿತಿ ಕಚೇರಿಯಲ್ಲಿ ಗೌಪ್ಯವಾಗಿರಬೇಕಾದ ಮಾಹಿತಿಗಳು ಸೋರಿಕೆಯಾಗಿರುವ ಕಾರಣ ಮಧ್ಯವರ್ತಿಗಳು ಡೀಲ್‍ಗೆ ಇಳಿಯಲು ಕಾರಣವಾಗಿದೆ. ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದಿದ್ದರು. ಈ ಬಗ್ಗೆ ತಮ್ಮ ಗಮನಕ್ಕೂ ಬಂದಿದೆ. ಸದಸ್ಯರ ಆರೋಪದಂತೆ ಟೆಂಡರ್‍ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿವರಣೆಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಮತ್ತೊಮ್ಮೆ ಇ-ಟೆಂಡರ್ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಅಧ್ಯಕ್ಷರು ಹೇಳಿದ್ದರು. ಸಭೆಯಲ್ಲಿ ಇಷ್ಟೆಲ್ಲಾ ಚರ್ಚೆಗಳಾದರೂ ಅಂತಿಮವಾಗಿ ನಿರ್ಣಯ ದಾಖಲಿಸುವ ಸಂದರ್ಭ, ಈಗಾಗಲೇ ನಡೆದಿರುವ ಟೆಂಡರ್‍ನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿ, ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಇದೀಗ ಮತ್ತೆ ಹೈಕೋರ್ಟ್ ತಡೆ ನೀಡಿದ್ದು, ಇಡೀ ಟೆಂಡರ್ ಪ್ರಕ್ರಿಯೆ ಗೊಂದಲಮಯವಾಗಿದೆ. ಈ ಹಿಂದೆ ಆಡಳಿತಾಧಿಕಾರಿಯಾಗಿದ್ದ ತಾಲೂಕು ತಹಶೀಲ್ದಾರ್ ನರಗುಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಈಗಿರುವ ವರ್ತಕರುಗಳಿಗೆ ಬಾಡಿಗೆ ಹೆಚ್ಚಿಸಿ ಮರು ಹಂಚಿಕೆ ಮಾಡಲು ಅವಕಾಶವಿದೆಯೇ ? ಎಂಬ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಪಡೆಯುವಂತೆ ಚುನಾಯಿತ ಸದಸ್ಯರುಗಳು ಅಭಿಪ್ರಾಯಿಸಿದ್ದರು. ಇವರ ಸಲಹೆಯನ್ನು ತಿರಸ್ಕರಿಸಿ, ಪ್ರತಿಷ್ಠೆ ತೋರಿದ್ದ ಆಡಳಿತಾಧಿಕಾರಿಗಳ ಕ್ರಮದಿಂದಾಗಿ ಇಂದಿಗೂ ಟೆಂಡರ್ ಪ್ರಕ್ರಿಯೆ ಪಟ್ಟಣ ಪಂಚಾಯಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಕೆಲ ಸದಸ್ಯರು ಅಭಿಪ್ರಾಯಿಸಿದ್ದಾರೆ.