ಬೆಂಗಳೂರು ಜ.9 NEWS DESK : ಮುಖ್ಯಮಂತ್ರಿಗಳು ಹಾಗೂ ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಭರವಸೆ ನೀಡಿದರು. ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಕೊಡಗು ಆದಿವಾಸಿ ಮುಖಂಡರು ಸೇರಿದಂತೆ ರಾಜ್ಯದ ವಿವಿಧ ಆದಿವಾಸಿ ಬುಡಕಟ್ಟು ಪ್ರಮುಖರಿಂದ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿದ ಸಚಿವರು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ವಿಠಲ್, ಕೊಡಗು ವಿಭಾಗ ಉಪಾಧ್ಯಕ್ಷರಾದ ಜಿ.ಬಿ.ಬೊಜ್ಜಮ್ಮ, ವಿರಾಜಪೇಟೆ ವಿಭಾಗದ ಪ್ರಧಾನ ಕಾರ್ಯದರ್ಶಿ ದಿಡ್ಡಳ್ಳಿ ಮುತ್ತಮ್ಮ, ಮೈಸೂರು ಕಾರ್ಯದರ್ಶಿ ಗಿರೀಶ್ ಬಿ.ಸಿ, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ, ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಉಪಾಧ್ಯಕ್ಷ ಡಾ.ನಿಶ್ಚಲ್ ದಂಬೆಕೋಡಿ ಮತ್ತಿತರ ಕರ್ನಾಟಕ ರಾಜ್ಯ ಅದಿವಾಸಿ ಅಭಿವೃದ್ಧಿ ಸಂಸ್ಥೆ ಮುಖಂಡರುಗಳು ಹಾಜರಿದ್ದರು.