ಮಡಿಕೇರಿ ಜ.9 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ 18 ವಯಸ್ಸಿನ ಒಳಗಿನ ಮಕ್ಕಳಿಗೆ ವಕ್ರ ಬೆನ್ನು ಹುರಿ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಗುರುತಿಸಲಾಗಿರುವ ಮಕ್ಕಳನ್ನು ಕರೆಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯಿಂದ ತಜ್ಞವೈದ್ಯರು ಬಂದಿದ್ದು, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವಶ್ಯಕತೆ ಕಂಡುಬರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದು, ತಪಾಸಣಾ ಶಿಬಿರಕ್ಕೆ ಹಾಜರಾಗಿರುವ ಮಕ್ಕಳ ಪೋಷಕರು ಸದುಪಯೋಗಪಡೆದುಕೊಳ್ಳುವಂತೆ ಕೋರಿದರು. ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯ ಬೆನ್ನುಹುರಿ ಮೂಳೆ ಶಸ್ತ್ರಚಿಕಿತ್ಸಕ ತಜ್ಞವೈದ್ಯರಾದ ಡಾ.ಡಿ.ರಾಘವೇಂದ್ರ ರಾವ್ ಮಾತನಾಡಿ, ಬೆನ್ನುಮೂಳೆಗಳ ವಿರೂಪಗಳು ಮತ್ತು ಡೊಂಕುತನ ಸರಿಪಡಿಸಲು ನಮ್ಮದೇ ಆದ ವೈದ್ಯರ ತಂಡವನ್ನು ರಚಿಸಿಕೊಂಡು ಸಾರ್ವಜನಿಕ ದಾನಿಗಳ ಪ್ರೋತ್ಸಾಹ ಮತ್ತು ಉದ್ಯಮಿಗಳ ಸಹಕಾರದೊಂದಿಗೆ ಇದಕ್ಕೆ ಸಂಬಂಧಿಸಿದಂತೆ ಸುಸಜ್ಜಿತವಾದ ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಉತ್ತಮ ಆಸ್ಪತ್ರೆ ನಡೆಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಬೆನ್ನುಹುರಿ ವಿರೂಪಗಳು ಮತ್ತು ಡೊಂಕುತನಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಬೆನ್ನುಹುರಿ ವಿರೂಪಗಳಿಂದ ಮಕ್ಕಳು ಬೆಳೆದು ದೊಡ್ಡವರಾದ ನಂತರ ಅನುಭವಿಸುವ ತೊಂದರೆಗಳ ಬಗ್ಗೆ ವಿವರಿಸಿ ಆರೋಗ್ಯದಲ್ಲಾಗುವ ಏರುಪೇರುಗಳನ್ನು ಹಾಜರಾಗಿದ್ದ ಪೋಷಕರಿಗೆ ವಿವರಿಸಿದರು. ವಿರೂಪಗಳನ್ನು 18 ವಯಸ್ಸಿನ ಒಳಗೆ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಿದಲ್ಲಿ ಮಕ್ಕಳು ಸಾಮಾನ್ಯ ಮಕ್ಕಳಂತೆ ಭವಿಷ್ಯದ ಜೀವನ ನಡೆಸಬಹುದು ಎಂದು ತಿಳಿಸಿದರು. ಪ್ರತೀ ವರ್ಷ 200 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಗುರಿ ಹೊಂದಿದ್ದು, ಇಲ್ಲಿಯವರೆಗೆ 120 ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದರು. ಈ ಶಿಬಿರಕ್ಕೆ ಒಟ್ಟು 8 ಮಕ್ಕಳು ಪೋಷಕರೊಂದಿಗೆ ಹಾಜರಾಗಿದ್ದರು. ಇವರನ್ನು ಪರೀಕ್ಷಿಸಿದ ವೈದ್ಯರು 6 ಮಕ್ಕಳಿಗೆ ಬೆಂಗಳೂರಿಗೆ ಬಂದು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹೆಚ್ಚಿನ ವಿರೂಪ ಮಕ್ಕಳನ್ನು ಪತ್ತೆಹಚ್ಚಿದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು. ಶಿಬಿರದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮಧುಸೂಧನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್‍ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಚೇತನ್ ಮತ್ತು ಡಾ.ಇಂದುಧರ ಮತ್ತು ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯ ವ್ಯವಸ್ಥಾಪಕರು, ಶ್ರೀನಿವಾಸ್ ಬಿ.ವಿ ಹಾಗೂ ಆರ್.ಬಿ.ಎಸ್.ಕೆ ತಂಡದ ಎಲ್ಲಾ ವೈದ್ಯರು ಹಾಗೂ ಸಿಬ್ಬಂಧಿಗಳು ಪಾಲ್ಗೊಂಡಿದ್ದರು.